ಅಮರಾವತಿ (ಮಹಾರಾಷ್ಟ್ರ):ರಜಾಕಾರರ ದಾಳಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ತಮ್ಮ ತಾಯಿ, ಸಹೋದರಿಯನ್ನು ಕಳೆದುಕೊಂಡರು. ಮುಸ್ಲಿಂ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿ ಅವರು ತಮ್ಮ ನೋವನ್ನು ಅದುಮಿಟ್ಟುಕೊಂಡಿದ್ದಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೇಳಿದರು.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆ ಅಮರಾವತಿಯಲ್ಲಿ ಮಂಗಳವಾರ ಮತಪ್ರಚಾರ ನಡೆಸಿದ ಯೋಗಿ, ತಮ್ಮನ್ನು ಟೀಕಿಸಿದ ಕಾಂಗ್ರೆಸ್ ಧುರೀಣಗೆ ಮಾತಿನ ಟಕ್ಕರ್ ನೀಡಿದರು.
ಖರ್ಗೆ ಅವರು ವೈಯಕ್ತಿಕವಾಗಿ ಮುಸ್ಲಿಮರಿಂದ ನೋವು ತಿಂದಿದ್ದಾರೆ. ಆದರೆ, ಅದನ್ನು ತಮ್ಮ ರಾಜಕೀಯಕ್ಕಾಗಿ, ಮತಗಳಿಗಾಗಿ ಆ ಬಗ್ಗೆ ಮಾತನಾಡದೇ ಮೌನವಾಗಿದ್ದಾರೆ. ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಐತಿಹಾಸಿಕ ದೌರ್ಜನ್ಯಗಳನ್ನು ನಿರ್ಲಕ್ಷಿಸುತ್ತದೆ ಎಂದು ಆದಿತ್ಯನಾಥ್ ಆರೋಪಿಸಿದರು.
ಖರ್ಗೆ ಹುಟ್ಟೂರೇ ಭಸ್ಮ ಮಾಡಿದ್ದ ರಜಾಕಾರರು:ನಿಜಾಮರ ಕಾಲದಲ್ಲಿ ಸೇನಾ ತುಕಡಿಯಾಗಿದ್ದ ರಜಾಕಾರರು ಮಲ್ಲಿಕಾರ್ಜುನ ಖರ್ಗೆ ಅವರ ಹುಟ್ಟೂರಾದ ವರವಟ್ಟಿಯನ್ನು ಸುಟ್ಟು ಭಸ್ಮ ಮಾಡಿದರು. ಈ ವೇಳೆ ಅವರ ತಾಯಿ, ಚಿಕ್ಕಮ್ಮ ಮತ್ತು ಸಹೋದರಿ ಸಾವನ್ನಪ್ಪಿದರು. ಇದು ಐತಿಹಾಸಿಕ ಸತ್ಯವಾಗಿದೆ. ಇದು ಖರ್ಗೆ ಅವರ ವೈಯಕ್ತಿಕ ನಷ್ಟ. ಆದರೆ, ಕೇವಲ ರಾಜಕೀಯಕ್ಕಾಗಿ ಅವರು ಈ ಎಲ್ಲಾ ನೋವನ್ನು ನುಂಗುತ್ತಿದ್ದಾರೆ ಎಂದು ಹೇಳಿದರು.
ನಿಜಾಮರ ಪಡೆಗಳ ದೌರ್ಜನ್ಯದ ಬಗ್ಗೆ ಮಾತನಾಡಿದರೆ ಮುಸ್ಲಿಂ ಮತಗಳನ್ನು ಕಳೆದುಕೊಳ್ಳಬಹುದು ಎಂಬ ಭಯದಿಂದ ಈ ಸತ್ಯವನ್ನು ಮುಚ್ಚಿಡುತ್ತಿದ್ದಾರೆ. ಕಾಂಗ್ರೆಸ್ ಇತಿಹಾಸವನ್ನು ಮರೆಯುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಹಿಂದುಗಳ ಮಾರಣಹೋಮ:1946 ರಲ್ಲಿ ಕಾಂಗ್ರೆಸ್‌ನ ಉನ್ನತ ನಾಯಕರು ಮುಸ್ಲಿಂ ಲೀಗ್ ಜೊತೆಗೆ ರಾಜಿ ಮಾಡಿಕೊಂಡರು. ಇದರ ಪರಿಣಾಮವಾಗಿ ಭಾರತದ ವಿಭಜನೆ ಮತ್ತು ಹಿಂದೂಗಳ ಹತ್ಯೆಯಾಯಿತು. ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ನಿಜಾಮರು ಸ್ವತಂತ್ರವಾಗಿ ಉಳಿಯಲು ಸಾಧ್ಯವಿಲ್ಲ ಎಂದು ಅರಿವಾದಾಗ, ಹಿಂದೂಗಳನ್ನು ಕೊಲ್ಲಲು ಆರಂಭಿಸಿದರು ಎಂದು ಉತ್ತರಪ್ರದೇಶ ಸಿಎಂ ಇತಿಹಾಸದ ಪುಟಗಳನ್ನು ತಿರುವಿದರು.
ಹಿಂದುಗಳ ಬಡಿದಾಡಿಕೊಂಡರೆ, ನಮ್ಮ ಹೆಣ್ಣುಮಕ್ಕಳಿಗೆ ಸುರಕ್ಷತೆ ಇಲ್ಲ. ದೇವಾಲಯಗಳ ಮೇಲೆ ದಾಳಿಯಾಗುತ್ತದೆ. ಸಮುದಾಯವನ್ನು ಗುರಿಯಾಗಿಸಲಾಗುತ್ತದೆ. ನಾವು ಒಗ್ಗಟ್ಟಿಲ್ಲದಿದ್ದಾಗ ಏನಾಗುತ್ತದೆ ಎಂಬುದಕ್ಕೆ ಇತಿಹಾಸವೇ ಸಾಕ್ಷಿ. ಮಹಾರಾಷ್ಟ್ರದಲ್ಲಿ ಲವ್ ಜಿಹಾದ್ ಮತ್ತು ಲ್ಯಾಂಡ್ ಜಿಹಾದ್ಗಳು ನಡೆಸಲಾಗುತ್ತಿದೆ ಎಂದು ಹಿಂದಿನ ಕಾಂಗ್ರೆಸ್ ಸರ್ಕಾರವನ್ನು ದೂಷಿಸಿದರು.
ಯೋಗಿ ಬಗ್ಗೆ ಖರ್ಗೆ ಹೇಳಿದ್ದೇನು?:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಯುಪಿ ಸಿಎಂ ಯೋಗಿ ಅವರನ್ನು ಟೀಕಿಸಿದ್ದರು. ಅವರೊಬ್ಬ ಕಾವಿ ಧರಿಸಿರುವ ಕ್ರೂರಿ. ಮುಖದಲ್ಲಿ ರಾಮನಂತೆ ಕಂಡರೂ, ಪಕ್ಕದಲ್ಲಿ ಚೂರಿ ಇಟ್ಟುಕೊಂಡಿರುತ್ತಾರೆ. ಮುಸ್ಲಿಮರು- ಹಿಂದೂಗಳನ್ನು ಒಡೆದು ಆಳುವುದೇ ಅವರ ಕೆಲಸ ಎಂದು ಜರಿದಿದ್ದರು.
ಇದನ್ನೂ ಓದಿ:ಜಾರ್ಖಂಡ್ ವಿಧಾನಸಭೆ ಚುನಾವಣೆ: 43 ಕ್ಷೇತ್ರಗಳಲ್ಲಿ ಬುಧವಾರ ಮೊದಲ ಹಂತದ ಮತದಾನ