ತಿರುವನಂತಪುರಂ: ಕೇರಳ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸುವಂತೆ ಕೇರಳ ವಿಧಾನಸಭೆ ಸೋಮವಾರ ನಿರ್ಣಯ ಅಂಗೀಕರಿಸಿತು. ಈಗ್ಗೆ ಒಂದು ವರ್ಷದ ಹಿಂದೆಯೇ ರಾಜ್ಯದ ಹೆಸರನ್ನು 'ಕೇರಳ'ದಿಂದ 'ಕೇರಳಂ' ಎಂದು ಬದಲಾಯಿಸಲು ಸಾಂವಿಧಾನಿಕ ತಿದ್ದುಪಡಿ ತರುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ರಾಜ್ಯ ವಿಧಾನಸಭೆ ಸರ್ವಾನುಮತದಿಂದ ಅಂಗೀಕರಿಸಿತ್ತು. ಆದರೆ ಆ ನಿರ್ಣಯಕ್ಕೆ ಕೆಲ ತಿದ್ದುಪಡಿಗಳನ್ನು ಮಾಡುವಂತೆ ಸೂಚಿಸಿ ಕೇಂದ್ರ ಸರ್ಕಾರ ವಾಪಸ್ ಕಳುಹಿಸಿತ್ತು. ಅದರಂತೆ ಈಗ ಮತ್ತೊಮ್ಮೆ ಸಣ್ಣ ತಿದ್ದುಪಡಿಗಳೊಂದಿಗೆ ಅದೇ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿದೆ. ಈ ನಿರ್ಣಯವನ್ನು ಈಗ ಅನುಮೋದನೆಗಾಗಿ ಕೇಂದ್ರಕ್ಕೆ ಕಳುಹಿಸಲಾಗುವುದು.
ಇಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಡಿಸಿದ ನಿರ್ಣಯದಲ್ಲಿ, ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರನ್ನು ಅಧಿಕೃತವಾಗಿ 'ಕೇರಳಂ' ಎಂದು ಬದಲಾಯಿಸಲು ಸಂವಿಧಾನದ 3ನೇ ವಿಧಿಯ ಅಡಿಯಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ನಿರ್ಣಯಕ್ಕೆ ಹೆಚ್ಚಿನ ಸ್ಪಷ್ಟತೆಯನ್ನು ನೀಡಲು ಕೆಲ ಪದಗಳನ್ನು ಬದಲಾಯಿಸಬೇಕೆಂಬ ಸಲಹೆಯೊಂದಿಗೆ ಐಯುಎಂಎಲ್ ಶಾಸಕ ಎನ್.ಶಂಸುದ್ದೀನ್ ಈ ಸಂದರ್ಭದಲ್ಲಿ ಮತ್ತೊಂದು ತಿದ್ದುಪಡಿಯನ್ನು ಮಂಡಿಸಿದರು. ಆದರೆ ಈ ಬೇಡಿಕೆಯನ್ನು ಸದನದಲ್ಲಿ ತಿರಸ್ಕರಿಸಲಾಯಿತು.
ರಾಜ್ಯದ ಹೆಸರನ್ನು ಅಧಿಕೃತವಾಗಿ ಬದಲಾಯಿಸುವ ನಿರ್ಣಯವನ್ನು ಕಳೆದ ವರ್ಷ ಆಗಸ್ಟ್ 9ರಂದು ಸರ್ವಾನುಮತದಿಂದ ಅಂಗೀಕರಿಸಲಾಗಿತ್ತು. ಸಂವಿಧಾನದ ಮೊದಲ ಅನುಸೂಚಿಯಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸುವಂತೆ ನಿರ್ಣಯದ ಮೂಲಕ ಕೇಂದ್ರಕ್ಕೆ ಕೋರಲಾಗಿತ್ತು. ಹಾಗೆಯೇ 8ನೇ ಪರಿಚ್ಛೇದದ ಅಡಿಯಲ್ಲಿ ಎಲ್ಲಾ ಭಾಷೆಗಳಲ್ಲಿ ರಾಜ್ಯದ ಹೆಸರನ್ನು 'ಕೇರಳಂ' ಎಂದು ಬದಲಾಯಿಸಬೇಕೆಂದು ಕೂಡ ಕೋರಲಾಗಿತ್ತು.