ನವದೆಹಲಿ:ದೆಹಲಿ ಮದ್ಯ ನೀತಿ ಹಗರಣದಲ್ಲಿ ಬಂಧಿತರಾಗಿರುವ ಅರವಿಂದ್ ಕೇಜ್ರಿವಾಲ್ ಅವರನ್ನು ತಿಹಾರ್ ಜೈಲಿನಲ್ಲಿ ಇರಿಸಲಾಗಿದೆ. ಅವರ ನಿತ್ಯ ಚಟುವಟಿಕೆಗಳು ಸಾಮಾನ್ಯ ಕೈದಿಯಂತೆ ಇವೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಸಕ್ಕರೆಮಟ್ಟ ಗುರುತಿಸುವ ಸೆನ್ಸಾರ್, ಗ್ಲುಕೋಮೀಟರ್, ಗ್ಲೂಕೋಸ್ ಮತ್ತು ಟೋಪಿಗಳನ್ನು ಕೊಡಲಾಗಿದೆ. ಅಬಕಾರಿ ಹಗರಣದಲ್ಲಿ ದೆಹಲಿ ಸಿಎಂ 'ಕಿಂಗ್‌ಪಿನ್' ಎಂದು ಆರೋಪಿಸಿರುವ ಇಡಿ, ವಿಚಾರಣೆಗೆ ಸಹಕರಿಸುತ್ತಿಲ್ಲ ಎಂದು ಆರೋಪಿಸಿದೆ. ಇದರಿಂದಾಗಿ ಹೆಚ್ಚಿನ ವಿಚಾರಣೆಗೆ ಕೋರಿದ್ದು, ಏಪ್ರಿಲ್ 15ರ ವರೆಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಏಪ್ರಿಲ್ 1 ರಂದು ತಿಹಾರ್ ಜೈಲಿಗೆ ಕೇಜ್ರಿವಾಲ್ರನ್ನು ವರ್ಗಾಯಿಸಲಾಗಿದ್ದು, ಅಂದು ಅವರು ಬೆಳಗ್ಗೆಯಿಂದ ಲವಲವಿಕೆಯಿಂದ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಜೈಲಿನ ನಿಯಮಗಳ ಪ್ರಕಾರ, ಬೆಳಗ್ಗೆ ಚಹಾ ಮತ್ತು ಉಪಹಾರ ಸೇವಿಸಿದರು ಎಂದು ಮೂಲಗಳು ತಿಳಿಸಿವೆ. ಹೆಚ್ಚಿನ ಭದ್ರತೆ ಇರುವ ಜೈಲು ಸಂಖ್ಯೆ 2 ರಲ್ಲಿ ಅವರನ್ನು ಪ್ರತ್ಯೇಕ ಕೋಣೆಯಲ್ಲಿ ಇರಿಸಲಾಗಿದೆ. ನ್ಯಾಯಾಲಯದ ಆದೇಶದಂತೆ ಮೂರು ಪುಸ್ತಕಗಳನ್ನು ಇಡಲು ಚಿಕ್ಕ ಟೇಬಲ್ ಮತ್ತು ಕುರ್ಚಿಯನ್ನು ಒದಗಿಸಲಾಗಿದೆ. ಮನೆ ತಿಂಡಿ ಮತ್ತು ಸೂಚಿಸಲಾದ ಔಷಧಿಗಳನ್ನು ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ.
ಕೇಜ್ರಿವಾಲ್ ಅವರು ಜೈಲಿಗೆ ತಾವೇ ತಂದುಕೊಂಡಿದ್ದ ಹಾಸಿಗೆಯಲ್ಲಿ ಮಲಗಿದ್ದರು. ಜೈಲು ಪ್ರಾಧಿಕಾರವು ನೀಡಿದ ಹಾಸಿಗೆಯನ್ನು ಬಳಸಿಲ್ಲ. ಕೋಣೆಯು ಚಿಕ್ಕದಾಗಿದ್ದು, ಸಮಸ್ಯೆಯಾದ ಬಗ್ಗೆ ದೂರು ನೀಡಿಲ್ಲ ಎಂದು ತಿಹಾರ್ ಜೈಲಿನ ಮೂಲಗಳು ಮಂಗಳವಾರ ತಿಳಿಸಿವೆ. ಕೋಣೆಯಲ್ಲಿ ಚಿಕ್ಕ ಮೇಜಿನ ಮೇಲೆ ಸಕ್ಕರೆ ಮಟ್ಟ ಸೂಚಕ ಯಂತ್ರ, ಗ್ಲುಕೋಮೀಟರ್, ಇಸಾಬ್ಗೋಲ್, ಗ್ಲೂಕೋಸ್ ಮತ್ತು ಟೋಪಿಗಳನ್ನು ಇಟ್ಟುಕೊಂಡಿದ್ದಾರೆ. ಸಕ್ಕರೆ ಕಾಯಿಲೆ ಬಾಧಿತರಾಗಿರುವ ಕೇಜ್ರಿವಾಲ್ ಅವುಗಳನ್ನು ಅಗತ್ಯ ಬಳಸಲು ಕೋರ್ಟ್ ಅವಕಾಶ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.