ನವದೆಹಲಿ: ಅರವಿಂದ್ ಕೇಜ್ರಿವಾಲ್ ಮಂಗಳವಾರ ರಾಜೀನಾಮೆ ನೀಡುವುದು ಖಚಿತ ಎಂದು ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ. ಮುಖ್ಯಮಂತ್ರಿ ಕೇಜ್ರಿವಾಲ್ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಯಲಿದ್ದಾರೆ ಎಂದು ಸೋಮವಾರ ಅವರು ದೃಢಪಡಿಸಿದ್ದಾರೆ.
11.30ಕ್ಕೆ ಶಾಸಕಾಂಗ ಪಕ್ಷದ ಸಭೆ: ಮಂಗಳವಾರ ಬೆಳಗ್ಗೆ 11.30ಕ್ಕೆ ಆಪ್ ಶಾಸಕರ ಸಭೆ ನಡೆಯಲಿದೆ ಎಂದು ಎಎಪಿ ತಿಳಿಸಿದೆ. ಇದರಲ್ಲಿ ನೂತನ ಮುಖ್ಯಮಂತ್ರಿ ಹೆಸರು ಚರ್ಚೆಯಾಗಲಿದೆ. ಇದಾದ ನಂತರ, ಸಿಎಂ ಅರವಿಂದ್ ಕೇಜ್ರಿವಾಲ್ ನಾಳೆ ಸಂಜೆ 4.30ಕ್ಕೆ ಲೆಫ್ಟಿನೆಂಟ್ ಜನರಲ್ಗೆ ರಾಜೀನಾಮೆ ಸಲ್ಲಿಸಬಹುದು ಮತ್ತು ಸಿಎಂ ಆಗಿ ಶಾಸಕಾಂಗ ಪಕ್ಷದ ಹೊಸ ನಾಯಕನ ಹೆಸರನ್ನು ಪ್ರಸ್ತಾಪಿಸಬಹುದು ಎಂದು ತಿಳಿದು ಬಂದಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್, ಪ್ರಾಮಾಣಿಕ ಎಎಪಿ ನಾಯಕನಿಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಕಿರುಕುಳ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಕೇಜ್ರಿವಾಲ್ ಅವರೊಂದಿಗೆ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿರುವ ರೀತಿಗೆ ಮುಂಬರುವ ಚುನಾವಣೆಯಲ್ಲಿ ಜನರೇ ಉತ್ತರ ನೀಡಲಿದ್ದಾರೆ ಎಂದು ಅವರು ಹೇಳಿದರು.
"ಇತಿಹಾಸದಲ್ಲಿ ಮೊದಲ ಬಾರಿಗೆ, ಚುನಾಯಿತ ಮುಖ್ಯಮಂತ್ರಿಯೊಬ್ಬರು ನ್ಯಾಯಾಲಯದ ತೀರ್ಪಿನ ನಂತರ ಜೈಲಿನಿಂದ ಬಿಡುಗಡೆಯಾಗಿದ್ದಾರೆ ಮತ್ತು ಸಿಎಂ ಸ್ಥಾನವು ಅವರಿಗಾಗಿ ಕಾಯುತ್ತಿದೆ. ಆದರೂ, ಜನತಾ ನ್ಯಾಯಾಲಯದಿಂದ ತೀರ್ಪು ಬರುವವರೆಗೂ ಆ ಆಸನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಜನ ತಮ್ಮನ್ನು ಪ್ರಾಮಾಣಿಕನೆಂದು ನಿರ್ಧರಿಸಿದರೆ ಮಾತ್ರ ಸಿಎಂ ಹುದ್ದೆ ವಹಿಸಿಕೊಳ್ಳುವುದಾಗಿ ಅವರು ತಿಳಿಸಿದ್ದಾರೆ. ಇದು ಬಹಳ ಮಹತ್ವದ ವಿಷಯವಾಗಿದೆ." ಎಂದು ಭಾರದ್ವಾಜ್ ಹೇಳಿದರು.