ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿದ್ದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ಸಿಎಂ ಅರವಿಂದ್ ಕೇಜ್ರಿವಾಲ್ ಅವರು ಇಂದು ತಿಹಾರ್ ಜೈಲಿಗೆ ಶರಣಾದರು. ಇದಕ್ಕೂ ಮುನ್ನ, ರಾಜ್ಘಾಟ್ಗೆ ತೆರಳಿ ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿದರು. ಹನುಮಾನ್ ದೇವಸ್ಥಾನಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪವನ್ನು ಕೇಜ್ರಿವಾಲ್ ಎದುರಿಸುತ್ತಿದ್ದಾರೆ. ಮೇ 10ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಇದರ ಅವಧಿ ಜೂನ್ 1ಕ್ಕೆ ಮುಕ್ತಾಯವಾಗಿದೆ. ಹೀಗಾಗಿ, ಇಂದು ಮರಳಿ ಜೈಲಿಗೆ ಶರಣಾಗುವಂತೆ ಕೋರ್ಟ್ ಆದೇಶಿಸಿತ್ತು.
ಜೈಲಿಗೆ ಮರಳುವ ಮುನ್ನ ಕೇಜ್ರಿವಾಲ್ ಮನೆಯಲ್ಲಿ ತಂದೆ-ತಾಯಿಯ ಆಶೀರ್ವಾದ ಪಡೆದರು. ಬಳಿಕ ಅಲ್ಲಿಂದ ರಾಜ್ಘಾಟ್ ಹಾಗೂ ಹನುಮಾನ್ ದೇವಸ್ಥಾನಕ್ಕೆ ತೆರಳಿದರು. ಈ ವೇಳೆ, ಪತ್ನಿ ಸುನೀತಾ ಕೇಜ್ರಿವಾಲ್, ಪಕ್ಷದ ನಾಯಕರು, ಸಚಿವರಾದ ಅತಿಶಿ, ಕೈಲಾಶ್ ಗಹ್ಲೋಟ್, ಸೌರಭ್ ಭಾರಧ್ವಾಜ್, ರಾಜ್ಯಸಭಾ ಸದಸ್ಯರಾದ ಸಂಜಯ್ ಸಿಂಗ್, ಸಂದೀಪ್ ಪಾಠಕ್ ಹಾಗೂ ದುರ್ಗೇಶ್ ಪಾಠಕ್, ರಾಖಿ ಬಿರ್ಲಾ, ರೀನಾ ಮೊದಲಾದವರು ಇದ್ದರು. ನಂತರ ಪಕ್ಷದ ಕಚೇರಿಗೆ ಆಗಮಿಸಿ, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ಉದ್ದೇಶಿಸಿ ಕೇಜ್ರಿವಾಲ್ ಮಾತನಾಡಿದರು. ಅಲ್ಲಿಂದ ಜೈಲಿಗೆ ತೆರಳಿ ಶರಣಾದರು.