ನಂದ್ಯಾಲ(ಆಂಧ್ರಪ್ರದೇಶ): ಶ್ರೀಶೈಲದ ಭ್ರಮರಾಂಬಿಕಾ ದೇವಿಯನ್ನು ಕನ್ನಡಿಗರು ತಮ್ಮ ಮನೆಯ ಹೆಣ್ಣು ಮಗಳಂತೆ ಪರಿಗಣಿಸುತ್ತಾರೆ. ಯುಗಾದಿ ಹಬ್ಬದಂದು ದೇವಿಗೆ ಅರಿಶಿನ-ಕುಂಕುಮ, ಸೀರೆಗಳು ಸೇರಿದಂತೆ ಇತರೆ ಪೂಜಾ ಸಾಮಗ್ರಿಗಳನ್ನು ಅರ್ಪಿಸುವುದು ಇಲ್ಲಿನ ವಾಡಿಕೆ. ಇಲ್ಲಿಗೆ ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.
ಕೆಲ ಭಕ್ತರು ನೂರಾರು ಕಿ.ಮೀ ಪಾದಯಾತ್ರೆಯ ಮೂಲಕ ಶಕ್ತಿ ಪೀಠವನ್ನು ತಲುಪುತ್ತಾರೆ. ಇನ್ನೂ ಕೆಲವರು ವಾಹನಗಳಲ್ಲಿ ನಂದ್ಯಾಲ ಜಿಲ್ಲೆಯ ಆತ್ಮಕೂರು ತಾಲೂಕಿನ ವೆಂಕಟಾಪುರಕ್ಕೆ ಬಂದು ಅಲ್ಲಿಂದ ನಲ್ಲಮಲ್ಲ ಅರಣ್ಯ ಪ್ರದೇಶದ ಮೂಲಕ ನಡೆದುಕೊಂಡು ಹೋಗುತ್ತಾರೆ. ಹೀಗೆ ಸಾಗುತ್ತಿರುವ ಕನ್ನಡಿಗ ಭಕ್ತರ ಸಮೂಹದಿಂದ ಕಾಡಿನ ಸುತ್ತಮುತ್ತ ತುಂಬಿದೆ. ಅವರ ಶಿವನಾಮದ ಪಠಣದಿಂದ ಗರ್ಭಗುಡಿ ಪ್ರತಿಧ್ವನಿಸುತ್ತದೆ. ಈ ವೇಳೆ ಪೆದ್ದೋರ್ನಾಳ-ಶ್ರೀಶೈಲ ರಸ್ತೆಯೂ ಭಕ್ತರ ಸಾಲುಗಳಿಂದ ತುಂಬಿ ತುಳುಕುತ್ತಿರುತ್ತದೆ.
ಇನ್ನು, ಇಂದಿನಿಂದ ಐದು ದಿನಗಳ ಕಾಲ ಯುಗಾದಿ ಮಹೋತ್ಸವ ನಡೆಯಲಿದ್ದು, ಶ್ರೀಶೈಲ ಮಹಾಕ್ಷೇತ್ರ ಭಕ್ತರಿಂದ ತುಂಬಿ ತುಳುಕುತ್ತಿರುತ್ತದೆ ಎಂದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಯುಗಾದಿ ಮಹೋತ್ಸವವನ್ನು ಆಚರಿಸಲು ಭಕ್ತರು ನಲ್ಲಮಲ್ಲ ಅರಣ್ಯ ಪ್ರದೇಶದಲ್ಲಿನ ಬೆಟ್ಟಗಳಿಂದ ಪಾದಯಾತ್ರೆ ಮೂಲಕ ಶ್ರೀಶೈಲವನ್ನು ತಲುಪುತ್ತಿದ್ದಾರೆ. ಶ್ರೀಶೈಲ ಕ್ಷೇತ್ರ ಸಾವಿರಾರು ಭಕ್ತರಿಂದ ಗಿಜಿಗುಡುತ್ತಿದೆ.