ನವದೆಹಲಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ್ ಖನ್ನಾ ಅವರು ಇಂದು ಪ್ರಮಾಣವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣವಚನ ಬೋಧಿಸಿದರು.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್, ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
6 ತಿಂಗಳು ಅಧಿಕಾರವಧಿ: ನ್ಯಾ.ಖನ್ನಾ 2025ರ ಮೇ 13ರವರೆಗೆ 6 ತಿಂಗಳ ಕಾಲ ಸೇವೆ ಸಲ್ಲಿಸಲಿದ್ದಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಕಳೆದ ತಿಂಗಳು ನ್ಯಾ.ಖನ್ನಾ ಅವರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದರು. ಅಕ್ಟೋಬರ್ 24ರಂದು ಕೇಂದ್ರ ಸರ್ಕಾರ ನ್ಯಾ.ಖನ್ನಾ ಅವರನ್ನು ದೇಶದ ಅತ್ಯುನ್ನತ ನ್ಯಾಯಾಂಗ ಹುದ್ದೆಗೆ ನೇಮಿಸಲು ಅನುಮೋದನೆ ನೀಡಿತು. ಮುಖ್ಯ ನ್ಯಾಯಮೂರ್ತಿಯಾಗಿ ಡಿ.ವೈ.ಚಂದ್ರಚೂಡ್ ಅಧಿಕಾರಾವಧಿ ಕಳೆದ ಶುಕ್ರವಾರ ಕೊನೆಗೊಂಡಿತ್ತು.
ಐತಿಹಾಸಿಕ ತೀರ್ಪುಗಳ ಭಾಗವಾಗಿದ್ದ ನ್ಯಾ.ಖನ್ನಾ: ನ್ಯಾ.ಸಂಜೀವ್ ಖನ್ನಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ 2019ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. 370ನೇ ವಿಧಿ ರದ್ದತಿಯನ್ನು ಎತ್ತಿ ಹಿಡಿದಿರುವುದು, ವ್ಯಭಿಚಾರವನ್ನು ಅಪರಾಧಮುಕ್ತಗೊಳಿಸುವುದು, ಚುನಾವಣಾ ಬಾಂಡ್ ಯೋಜನೆ ರದ್ದು, ಇವಿಎಂ-ವಿವಿಪ್ಯಾಟ್ ಎಣಿಕೆ ಇತ್ಯಾದಿ ಪ್ರಕರಣಗಳ ಐತಿಹಾಸಿಕ ತೀರ್ಪುಗಳ ಭಾಗವಾಗಿದ್ದಾರೆ.