ನವದೆಹಲಿ:ಕಾವೇರಿ ನದಿ ನೀರು ವಿವಾದದಲ್ಲಿ ಕರ್ನಾಟಕದ ಪರ ಸುಪ್ರೀಂಕೋರ್ಟ್ನಲ್ಲಿ ದೀರ್ಘವಾಗಿ ವಾದ ಮಂಡಿಸಿದ್ದ ಖ್ಯಾತ ಹಿರಿಯ ವಕೀಲ, ಮಾಜಿ ಸಾಲಿಸಿಟರ್ ಜನರಲ್ ಪಾಲಿ ಎಸ್ ನಾರಿಮನ್ ಅವರು ಬುಧವಾರ ನಿಧನರಾದರು. ಸುಪ್ರೀಂಕೋರ್ಟ್ನ ಖ್ಯಾತ ವಕೀಲರು, ನ್ಯಾಯಶಾಸ್ತ್ರಜ್ಞರೂ ಆಗಿದ್ದ 95 ವರ್ಷ ವಯಸ್ಸಿನ ಪಾಲಿ ನಾರಿಮನ್ ಅವರು ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ನವದೆಹಲಿಯಲ್ಲಿ ಇಂದು ಮಧ್ಯರಾತ್ರಿ 1 ಗಂಟೆಗೆ ಅವರು ದೈವಾಧೀನರಾದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ನಾರಿಮನ್ ಅವರು ಜನವರಿ 10, 1929ರಂದು ಮ್ಯಾನ್ಮಾರ್‌ನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದ್ದರು. ಬಳಿಕ ಅವರ ಕುಟುಂಬ ಭಾರತಕ್ಕೆ ಬಂದಿತ್ತು. ಬಾಂಬೆ ಹೈಕೋರ್ಟ್‌ನಲ್ಲಿ ಮೊದಲು ವಕೀಲರಾಗಿ ಅಭ್ಯಾಸವನ್ನು ಪ್ರಾರಂಭಿಸಿದ್ದ ಅವರು, ನಂತರ ದೆಹಲಿಗೆ ತೆರಳಿದ್ದರು. ನ್ಯಾಯಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ನಾರಿಮನ್, 1972ರಲ್ಲಿ ಭಾರತದ ಸಾಲಿಸಿಟರ್ ಜನರಲ್ ಆಗಿಯೂ ನೇಮಕಗೊಂಡಿದ್ದರು.
ಇಂದಿರಾ ವಿರುದ್ಧ ಸಿಡಿದಿದ್ದ ಲಾಯರ್:ಸುಪ್ರೀಂಕೋರ್ಟ್ನಲ್ಲಿ ವಕೀಲಿಕೆ ಮಾಡುತ್ತಿದ್ದ ನಾರಿಮನ್ರ ಖ್ಯಾತಿ ಆಗಸದಷ್ಟಿತ್ತು. ಪ್ರಖರ ವಾದದಿಂದಾಗಿಯೇ ಗಮನ ಸೆಳೆಯುತ್ತಿದ್ದರು. 1975ರಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸುವ ನಿರ್ಧಾರವನ್ನು ವಿರೋಧಿಸಿದವರಲ್ಲಿ ನಾರಿಮನ್ ಕೂಡ ಒಬ್ಬರಾಗಿದ್ದರು. ಇಂದಿರಾ ಅವರ ನಿರ್ಧಾರವನ್ನು ಧಿಕ್ಕರಿಸಿ ಸಾಲಿಸಿಟರ್ ಜನರಲ್ ಹುದ್ದೆಗೆ ರಾಜೀನಾಮೆ ನೀಡಿದ್ದರು.