ನವದೆಹಲಿ:ಜೂನ್ 1 ರಿಂದ ಆರಂಭವಾಗಿರುವ ಮಾನ್ಸೂನ್ ಅವಧಿಯಲ್ಲಿ ಭಾರತದಲ್ಲಿ ಶೇ 20 ರಷ್ಟು ಕಡಿಮೆ ಮಳೆಯಾಗಿದೆ. ಜೂನ್ 12 ಮತ್ತು 18 ರ ನಡುವೆ ಮಾನ್ಸೂನ್ ಮಳೆ ಬೀಳುವಿಕೆಯಲ್ಲಿ ಗಮನಾರ್ಹ ಪ್ರಗತಿ ಕಂಡು ಬಂದಿಲ್ಲ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಆದಾಗ್ಯೂ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಮಹಾರಾಷ್ಟ್ರ, ಛತ್ತೀಸ್‌ಗಢ, ಒಡಿಶಾ, ಕರಾವಳಿ ಆಂಧ್ರಪ್ರದೇಶ, ವಾಯುವ್ಯ ಬಂಗಾಳ ಕೊಲ್ಲಿ, ಬಿಹಾರ ಮತ್ತು ಜಾರ್ಖಂಡ್‌ನ ಭಾಗಗಳಲ್ಲಿ ಮಾನ್ಸೂನ್ ಚುರುಕಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭರವಸೆ ವ್ಯಕ್ತಪಡಿಸಿದೆ. ಭಾರತವು ಜೂನ್ 1 ಮತ್ತು 18 ರ ನಡುವೆ 64.5 ಮಿಮೀ ಮಳೆಯನ್ನು ಮಾತ್ರವೇ ಪಡೆದಿದೆ, ಇದು ದೀರ್ಘಾವಧಿಯ ಸರಾಸರಿ (ಎಲ್‌ಪಿಎ) 80.6 ಮಿಮೀಗಿಂತ ಅಂದರೆ ಶೇ 20ರಷ್ಟು ಕಡಿಮೆಯಾಗಿದೆ ಎಂದು ಇಲಾಖೆ ಹೇಳಿದೆ.
ಜೂನ್ 1 ರಿಂದ ವಾಯುವ್ಯ ಭಾರತದಲ್ಲಿ 10.2 ಮಿಮೀ ಮಳೆಯಾಗಿದೆ ಇದು ಸಾಮಾನ್ಯಕ್ಕಿಂತ ಶೇ 70ರಷ್ಟು ಕಡಿಮೆಯಾಗಿದೆ. ಈ ಮಧ್ಯ ಭಾರತದಲ್ಲಿ 50.5 ಮಿಮೀ ಮಳೆ ಸುರಿದಿದ್ದು, ಸಾಮಾನ್ಯಕ್ಕಿಂತ ಶೇ 31ರಷ್ಟು ಕಡಿಮೆಯಾಗಿದೆ. ಆದರೆ, ದಕ್ಷಿಣ ಪೆನಿನ್ಸುಲಾ 106.6 ಮಿಮೀ ಮಳೆಯಾಗಿದ್ದು, ಇದು ಸಾಮಾನ್ಯಕ್ಕಿಂತ ಶೇ16ರಷ್ಟು ಹೆಚ್ಚು ಮತ್ತು ಪೂರ್ವ ಮತ್ತು ಈಶಾನ್ಯ ಭಾರತ 146.7 ಮಿಮೀ ಮಳೆ ಆಗಿದ್ದು, ಇದು ಸಾಮಾನ್ಯಕ್ಕಿಂತ 15 ಪ್ರತಿಶತ ಕಡಿಮೆ ಎಂದು ಇಲಾಖೆ ಅಂಕಿ - ಅಂಶಗಳ ಸಮೇತ ಮಾಹಿತಿ ನೀಡಿದೆ.
ನೈರುತ್ಯ ಮಾನ್ಸೂನ್ ಮೇ 19 ರಂದು ನಿಕೋಬಾರ್ ದ್ವೀಪಗಳಿಗೆ ಕಾಲಿಟ್ಟಿತ್ತು, ನಂತರ ಮೇ 26 ರ ಹೊತ್ತಿಗೆ ದಕ್ಷಿಣದ ಹೆಚ್ಚಿನ ಭಾಗಗಳನ್ನು ಆವರಿಸಿಕೊಂಡಿತ್ತು. ಮಧ್ಯ ಬಂಗಾಳ ಕೊಲ್ಲಿಯ ಕೆಲವು ಭಾಗಗಳನ್ನು ರೆಮಲ್ ಚಂಡಮಾರುತದೊಂದಿಗೆ ದಾಂಗುಡಿ ಇಟ್ಟಿತ್ತು.
ಇನ್ನು ಏಕಕಾಲದಲ್ಲಿ ಕೇರಳ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮೇ 30 ರಂದು ಪ್ರವೇಶ ಮಾಡಿತ್ತು. ಸಾಮಾನ್ಯಕ್ಕಿಂತ ಎರಡರಿಂದ ಆರು ದಿನ ಮುಂಚಿತವಾಗಿ ಕೇರಳ ಪ್ರವೇಶಿಸಿದ್ದ ಮುಂಗಾರು ರೈತರಲ್ಲಿ ಹರ್ಷವನ್ನುಂಟು ಮಾಡಿತ್ತು. ಆದರೆ, ನಿರೀಕ್ಷೆಯಂತೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಲು ವಿಫಲವಾಗಿದೆ. ಜೂನ್ 12 ರ ಹೊತ್ತಿಗೆ ಕೇರಳ, ಕರ್ನಾಟಕ, ಗೋವಾ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಮುಂಗಾರು ಆವರಿಸಿತ್ತು. ದಕ್ಷಿಣ ಮಹಾರಾಷ್ಟ್ರದ ಹೆಚ್ಚಿನ ಭಾಗಗಳು ಮತ್ತು ದಕ್ಷಿಣ ಛತ್ತೀಸ್‌ಗಢ ಮತ್ತು ದಕ್ಷಿಣ ಒಡಿಶಾದ ಕೆಲವು ಭಾಗಗಳು; ಮತ್ತು ಉಪ - ಹಿಮಾಲಯ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಎಲ್ಲ ಈಶಾನ್ಯ ರಾಜ್ಯಗಳ ಹೆಚ್ಚಿನ ಭಾಗಗಳಲ್ಲಿ ಮುಂಗಾರು ಆವರಿಸಿದೆ. ಆದರೆ, ನಿರೀಕ್ಷಿತ ಪ್ರಮಾಣದ ಮಳೆ ಸುರಿಸಲು ಸಾಧ್ಯವಾಗಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.