ಕರ್ನಾಟಕ

karnataka

By ANI

Published : Apr 3, 2024, 4:35 PM IST

ETV Bharat / bharat

I.N.D.I.A ಕೂಟಕ್ಕೆ ಮತ್ತೊಂದು ಶಾಕ್​: ಕಾಶ್ಮೀರದಲ್ಲಿ ಪಿಡಿಪಿ ಸ್ವತಂತ್ರ ಸ್ಪರ್ಧೆ - Mehabooba Mufti

ಇಂಡಿಯಾ ಕೂಟಕ್ಕೆ ಮತ್ತೊಂದು ಹಿನ್ನಡೆ ಉಂಟಾಗಿದೆ. ಜಮ್ಮು ಕಾಶ್ಮೀರದಲ್ಲಿ ಪಿಡಿಪಿ ಮತ್ತು ನ್ಯಾಷನಲ್​ ಕಾನ್ಫ​ರೆನ್ಸ್​ ಪಕ್ಷಗಳು ಮೈತ್ರಿ ಮುರಿದುಕೊಂಡಿವೆ.

ಕಾಶ್ಮೀರದಲ್ಲಿ ಪಿಡಿಪಿ ಸ್ಪತಂತ್ರ ಸ್ಪರ್ಧೆ ಘೋಷಣೆ
ಕಾಶ್ಮೀರದಲ್ಲಿ ಪಿಡಿಪಿ ಸ್ಪತಂತ್ರ ಸ್ಪರ್ಧೆ ಘೋಷಣೆ

ಶ್ರೀನಗರ(ಜಮ್ಮು ಮತ್ತು ಕಾಶ್ಮೀರ):ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳು ಸೇರಿ ರಚಿಸಿಕೊಂಡ I.N.D.I.A ಕೂಟಕ್ಕೆ ಮತ್ತೊಂದು ದೊಡ್ಡ ಹಿನ್ನಡೆಯಾಗಿದೆ. ಟಿಎಂಸಿ, ಆಪ್​, ನ್ಯಾಷನಲ್​ ಕಾನ್ಫರೆನ್ಸ್​(ಎನ್​ಸಿ), ಜೆಡಿಯು ಬಳಿಕ ಇದೀಗ ಪಿಡಿಪಿ ಕೂಡ ಸ್ವತಂತ್ರವಾಗಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಲೋಕಸಭೆ ಚುನಾವಣೆಯಲ್ಲಿ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದ 5 ಕ್ಷೇತ್ರಗಳಿಗೆ ತಮ್ಮ ಅಭ್ಯರ್ಥಿಗಳನ್ನು ಪ್ರತ್ಯೇಕವಾಗಿ ಕಣಕ್ಕಿಳಿಸುವುದಾಗಿ ಘೋಷಿಸಿದರು.

ಇದಕ್ಕೂ ಮೊದಲು, ಕಾಶ್ಮೀರದ ಎಲ್ಲಾ ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ನಾಯಕ ಒಮರ್ ಅಬ್ದುಲ್ಲಾ ಘೋಷಿಸಿದ ಬೆನ್ನಲ್ಲೇ, ಮೆಹಬೂಬಾ ಮಹತ್ವದ ನಿರ್ಧಾರ ತಳೆದಿದ್ದಾರೆ.

ಪಿಡಿಪಿ ಟೀಕಿಸಿದ್ದಕ್ಕೆ ಬೇಸರ:ನ್ಯಾಷನಲ್​ ಕಾನ್ಫ್​​ರೆನ್ಸ್​ ಪಕ್ಷದ ನಾಯಕ, ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರು ಮೈತ್ರಿಗೆ ಒಲವು ಹೊಂದಿದ್ದಾರೆ. ಆದರೆ, ಅವರ ಪುತ್ರ ಮತ್ತು ಮಾಜಿ ಸಿಎಂ ಒಮರ್ ಅಬ್ದುಲ್ಲಾ ಈ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿಲ್ಲ. ಅವರು ನನ್ನೊಂದಿಗೆ ಚರ್ಚಿಸಿಲ್ಲ. ಲೋಕಸಭೆ ಚುನಾವಣೆಯಲ್ಲಿ ಒಟ್ಟಾಗಿ ಕಣಕ್ಕಿಳಿಯುವುದಿಲ್ಲ ಎಂದು ಮುಫ್ತಿ ಶ್ರೀನಗರದಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪಿಡಿಪಿ ಅಸ್ತಿತ್ವದಲ್ಲಿಲ್ಲ, ಎಲ್ಲಿಯೂ ಯಾವ ಕ್ಷೇತ್ರದಲ್ಲೂ ಶಕ್ತಿ ಹೊಂದಿಲ್ಲ ಎಂದು ಒಮರ್ ಅಬ್ದುಲ್ಲಾ ಹೇಳಿಕೆ ನೀಡಿರುವುದು ನಮಗೆ ನೋವುಂಟು ಮಾಡಿದೆ. ವಿರೋಧಿ ಪಕ್ಷ ಬಿಜೆಪಿ ದೊಡ್ಡ ಸವಾಲಾಗಿದ್ದರೆ, ಒಮರ್ ಅವರ ಹೇಳಿಕೆ ಪಕ್ಷದ ಕಾರ್ಯಕರ್ತರಲ್ಲಿ ನಿರಾಸೆ ಮೂಡಿಸಿದೆ. ಕಾರ್ಯಕರ್ತರು ನನಗೆ ಕರೆ ಮಾಡಿ ನಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎಂದು ಒತ್ತಾಯಿಸಿದ್ದಾರೆ. ಹೀಗಾಗಿ ಸ್ವತಂತ್ರವಾಗಿ ಸ್ಪರ್ಧೆ ಮಾಡುತ್ತೇವೆ ಎಂದರು.

ಮುಫ್ತಿಗೆ ಮೈತ್ರಿ ಬೇಕಿಲ್ಲ:ಇದಕ್ಕೆ ಪ್ರತಿಕ್ರಿಯಿಸಿರುವ ನ್ಯಾಷನಲ್​ ಕಾನ್ಫ್​ರೆನ್ಸ್​​ ನಾಯಕ ಒಮರ್​ ಅಬ್ದುಲ್ಲಾ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಎಲ್ಲಾ 5 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಘೋಷಿಸಿದ್ದರೆ, ಅದು ಅವರ ಆಯ್ಕೆ. ನಾವು ಮೈತ್ರಿ ಸೂತ್ರದ ಆಧಾರದ ಮೇಲೆ ಕಾಶ್ಮೀರದಲ್ಲಿ 3 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ. ಬಹುಶಃ ಅವರು ವಿಧಾನಸಭೆ ಚುನಾವಣೆಗೆ ಮೈತ್ರಿ ಬಯಸುತ್ತಿಲ್ಲ. ನಮ್ಮ ಕಡೆಯಿಂದ ಮುಕ್ತ ಅವಕಾಶವಿದೆ. ಅವರು ಮೈತ್ರಿಯಿಂದ ಹೊರಹೋದರೆ ಅದು ನಮ್ಮ ತಪ್ಪಲ್ಲ ಎಂದು ಹೇಳಿದರು.

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಎರಡೂ ಪ್ರಾದೇಶಿಕ ಪಕ್ಷಗಳು ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವ ಬಗ್ಗೆ 'ಗುಪ್ಕರ್ ಘೋಷಣೆ' ಹೊರಡಿಸಿದ್ದವು. ಕೇಂದ್ರಾಡಳಿತ ಪ್ರದೇಶದ ಐದು ಲೋಕಸಭಾ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಮೊದಲ ಐದು ಹಂತಗಳಲ್ಲಿ ಮತದಾನ ನಡೆಯಲಿದೆ. ಉಧಂಪುರ (ಏಪ್ರಿಲ್ 19), ಜಮ್ಮು(ಏಪ್ರಿಲ್ 26), ಅನಂತನಾಗ್-ರಾಜೌರಿ ಕ್ಷೇತ್ರಕ್ಕೆ (ಮೇ 7), ಶ್ರೀನಗರದಲ್ಲಿ (ಮೇ 13) ಮತ್ತು ಬಾರಾಮುಲ್ಲಾ ಕ್ಷೇತ್ರದಲ್ಲಿ ಮೇ 20ರಂದು ಮತದಾನ ನಡೆಯಲಿದೆ.

ಇದನ್ನೂ ಓದಿ:ಲೋಕಸಭೆ ಚುನಾವಣೆ 2024: ವಯನಾಡ್​ ಕ್ಷೇತ್ರದಲ್ಲಿ ರಾಹುಲ್ ಗಾಂಧಿ ವಿರುದ್ಧ ಅನ್ನಿ ರಾಜ ನಾಮಪತ್ರ ಸಲ್ಲಿಕೆ - Lok Sabha Election

ABOUT THE AUTHOR

...view details