ನವದೆಹಲಿ:ಲೋಕಸಭೆ ಚುನಾವಣೆಯ ಬಳಿಕ ಇದೇ ಮೊದಲ ರಾಜ್ಯ ವಿಧಾನಸಭೆ ಚುನಾವಣೆ ಎದುರಿಸಿರುವ ಹರಿಯಾಣ ಮತ್ತು ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದಲ್ಲಿ ಇಂದು ಫಲಿತಾಂಶ ಹೊರಬೀಳಲಿದೆ. ಚುನಾವಣಾ ಆಯೋಗ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ರಾಜಕೀಯ ಪಕ್ಷಗಳು ಫಲಿತಾಂಶಕ್ಕಾಗಿ ತುದಿಗಾಲ ಮೇಲೆ ನಿಂತಿವೆ.
ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮತ ಎಣಿಕೆ ಕೇಂದ್ರಗಳಲ್ಲಿ ಮೂರು ಹಂತದ ಭದ್ರತೆ ಹಾಕಲಾಗಿದೆ. ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಐಎನ್‌ಎಲ್‌ಡಿ-ಬಿಎಸ್‌ಪಿ, ಜೆಜೆಪಿ-ಆಜಾದ್ ಸಮಾಜ ಪಕ್ಷಗಳ ಮಧ್ಯೆ ಸ್ಪರ್ಧೆ ಇದೆ. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯುವ ಸಾಧ್ಯತೆ ಇದೆ. ರಾಜ್ಯದ 90 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 5ರಂದು ಮತದಾನ ನಡೆದಿದ್ದು, 1,031 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಶೇಕಡಾ 67.90ರಷ್ಟು ಮತದಾನವಾಗಿತ್ತು.
ಘಟಾನುಘಟಿಗಳ ಹಣೆಬರಹ ನಿರ್ಧಾರ: ಬಿಜೆಪಿ ಅಧಿಕಾರಿದಲ್ಲಿರುವ ರಾಜ್ಯದಲ್ಲಿ ಸಿಎಂ ನಯಾಬ್ ಸಿಂಗ್ ಸೈನಿ, ಕಾಂಗ್ರೆಸ್ನಿಂದ ಕುಸ್ತಿಪಟು ವಿನೇಶ್ ಫೋಗಟ್, ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, ಜನನಾಯಕ್ ಪೀಪಲ್ಸ್ ಪಾರ್ಟಿಯ ನಾಯಕ ದುಶ್ಯಂತಸಿಂಗ್ ಚೌಟಾಲಾ ಸೇರಿದಂತೆ ಹಲವು ಘಟಾನುಘಟಿಗಳ ಭವಿಷ್ಯ ಇಂದು ಪ್ರಕಟವಾಗಲಿದೆ. ಐಎನ್‌ಎಲ್‌ಡಿ-ಬಿಎಸ್‌ಪಿ ಚುನಾವಣಾ ಪೂರ್ವ ಮೈತ್ರಿ ರಚಿಸಿಕೊಂಡಿದ್ದರೆ, ಇಂಡಿಯಾ ಕೂಟದ ಸದಸ್ಯ ಪಕ್ಷಗಳಾದ ಆಪ್ ಮತ್ತು ಕಾಂಗ್ರೆಸ್ ಮೈತ್ರಿ ಇಲ್ಲದೇ ಕಣಕ್ಕಿಳಿದಿವೆ. ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ.
2019ರ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ-41, ಕಾಂಗ್ರೆಸ್-28 ಮತ್ತು ಜೆಜೆಪಿ 6 ಸ್ಥಾನಗಳನ್ನು ಪಡೆದರೆ, ಹರಿಯಾಣ ಲೋಕಿತ್ ಪಕ್ಷ ಮತ್ತು ಐಎಲ್ಎನ್ಡಿ ತಲಾ 1 ಸ್ಥಾನ ಗೆದ್ದಿದ್ದವು. ಜೆಜೆಪಿ ಜೊತೆಗೂಡಿ ಬಿಜೆಪಿ ಸರ್ಕಾರ ರಚಿಸಿತ್ತು. ಆದರೆ, ಈ ವರ್ಷದ ಮಾರ್ಚ್‌ನಲ್ಲಿ ಮನೋಹರ್ ಲಾಲ್ ಖಟ್ಟರ್ ಬದಲಿಗೆ ನಯಾಬ್ ಸಿಂಗ್ ಸೈನಿ ಅವರನ್ನು ಬಿಜೆಪಿ ಸಿಎಂ ಆಗಿ ನೇಮಿಸಿದ ನಂತರ, ಜೆಜೆಪಿ ಕಮಲದಳದೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡಿತ್ತು.