ಕರ್ನಾಟಕ

karnataka

ETV Bharat / bharat

ಅತ್ಯಾಚಾರ ಪ್ರಕರಣದ ಅಪರಾಧಿ ರಾಮ್ ರಹೀಮ್​ಗೆ 12ನೇ ಬಾರಿ ಸಿಕ್ತು ಪೆರೋಲ್! - RAM RAHIM GETS PAROLE

ತನ್ನ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧದ ಮೇಲೆ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿವಾದಾತ್ಮಕ ಡೇರಾ ಸಚ್ಚಾ ಸೌದಾ ಮುಖ್ಯಸ್ಥನಿಗೆ 12ನೇ ಬಾರಿಗೆ ಪೆರೋಲ್ ಸಿಕ್ಕಿದೆ.

ಡೇರಾ ಸಚ್ಚಾ ಸೌದಾ ಮುಖಂಡ ರಾಮ್ ರಹೀಮ್​
ಡೇರಾ ಸಚ್ಚಾ ಸೌದಾ ಮುಖಂಡ ರಾಮ್ ರಹೀಮ್​ (IANS)

By ETV Bharat Karnataka Team

Published : Jan 28, 2025, 1:12 PM IST

ಚಂಡೀಗಢ:ಹರಿಯಾಣದ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ವಿವಾದಾತ್ಮಕ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ ಮಂಗಳವಾರ ಮತ್ತೊಮ್ಮೆ 30 ದಿನಗಳ ಪೆರೋಲ್ ನೀಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ರಾಮ್ ರಹೀಮ್ ಸಿಂಗ್​​ಗೆ ಇದು 12ನೇ ಪೆರೋಲ್ ಆಗಿದೆ. ತನ್ನ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಅಪರಾಧದ ಮೇಲೆ ಈತ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

2017ರ ಆಗಸ್ಟ್​ನಲ್ಲಿ 20 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾದ ಬಳಿಕ ಇದೇ ಮೊದಲ ಬಾರಿಗೆ ಸಿರ್ಸಾದಲ್ಲಿರುವ ತನ್ನ ಪಂಥದ ಡೇರಾಗೆ ತೆರಳಲಿರುವ ಗುರ್ಮೀತ್, ಅಲ್ಲಿ 10 ದಿನಗಳ ಕಾಲ ಇರಲಿದ್ದಾನೆ. ನಂತರ ಉತ್ತರ ಪ್ರದೇಶದ ಬಾಗ್ ಪಥ್​ಗೆ ತೆರಳಲಿದ್ದಾನೆ.

ಕಳೆದ ವರ್ಷದ ಅಕ್ಟೋಬರ್ 5ರಂದು ಹರಿಯಾಣದಲ್ಲಿ ಮತದಾನ ನಡೆಯಲು ನಾಲ್ಕು ದಿನಗಳ ಮುನ್ನ ಗುರ್ಮೀತ್ 20 ದಿನಗಳ ಪೆರೋಲ್ ಪಡೆದಿದ್ದ. ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದ್ದ ಈತ ಅವರ ಮೇಲೆ ರಾಜಕೀಯವಾಗಿ ಪ್ರಭಾವ ಬೀರಬಲ್ಲವನಾಗಿದ್ದರಿಂದ ಹರಿಯಾಣದ ರಾಜಕೀಯ ಮುಖಂಡರು ಮತ್ತು ಪಕ್ಷಗಳು ದಶಕಗಳ ಕಾಲ ಈತನ ಬೆಂಬಲ ಪಡೆಯಲು ಹಾತೊರೆಯುತ್ತಿದ್ದರು.

ಕಳೆದ ಬಾರಿ ತಮ್ಮ ತಂದೆ ಮಗರ್ ಸಿಂಗ್ ಅವರ ಪುಣ್ಯತಿಥಿಯ ಕಾರಣಕ್ಕಾಗಿ ಪೆರೋಲ್ ಕೋರಿದ್ದ. ಅಕ್ಟೋಬರ್ 5ರಂದು ಈತನ ತಂದೆಯ ಪುಣ್ಯತಿಥಿಯನ್ನು ಪಾರಮಾರ್ಥಿ ದಿವಸ್ ಎಂದು ಆಚರಿಸಲಾಗುತ್ತದೆ. ಕಳೆದ ವರ್ಷ ಹರಿಯಾಣ ಸರ್ಕಾರ ಆಗಸ್ಟ್​ನಲ್ಲಿ ಈತನಿಗೆ 21 ದಿನಗಳ ಫರ್ಲೋ ರಜೆಯನ್ನು ನೀಡಿತ್ತು. ಅದು ಸೆಪ್ಟೆಂಬರ್ 2ರಂದು ಕೊನೆಗೊಂಡಿತ್ತು.

ರಾಮ್ ರಹೀಮ್ ಪ್ರಸ್ತುತ ರಾಜ್ಯ ರಾಜಧಾನಿ ಚಂಡೀಗಢದಿಂದ 250 ಕಿ.ಮೀ ದೂರದಲ್ಲಿರುವ ರೋಹ್ಟಕ್‌ನ ಭಾರಿ ಭದ್ರತೆಯ ಸುನಾರಿಯಾ ಜೈಲಿನಲ್ಲಿದ್ದಾನೆ.

ಈ ಹಿಂದೆ ರಾಮ್ ರಹೀಮ್ ತನ್ನ ಸಾಕು ಹೆಣ್ಣುಮಕ್ಕಳ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಸಲ್ಲಿಸಿದ್ದ ಪೆರೋಲ್ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಸ್ವಯಂ ಘೋಷಿತ ದೇವಮಾನವನಿಗೆ 2017ರ ಆಗಸ್ಟ್‌ನಲ್ಲಿ 20 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಪತ್ರಕರ್ತನ ಕೊಲೆ ಕೇಸ್‌: 2019ರಲ್ಲಿ ಪಂಚಕುಲದ ವಿಶೇಷ ಸಿಬಿಐ ನ್ಯಾಯಾಲಯವು 16 ವರ್ಷಗಳ ಹಿಂದೆ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಈತನಿಗೆ ಮತ್ತು ಇತರ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆಗಸ್ಟ್ 25, 2017 ರಂದು ಈತನಿಗೆ ಶಿಕ್ಷೆ ವಿಧಿಸಿದಾಗ ಪಂಚಕುಲ ಮತ್ತು ಸಿರ್ಸಾದಲ್ಲಿ ಹಿಂಸಾಚಾರ ನಡೆದು 41 ಜನರು ಸಾವನ್ನಪ್ಪಿದ್ದರು ಮತ್ತು 260ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

ಇದನ್ನೂ ಓದಿ: ಸಲ್ಮಾನ್​ ಖಾನ್​ ಆಪ್ತ, ಎನ್​ಸಿಪಿ ನಾಯಕ ಬಾಬಾ ಸಿದ್ದಿಕಿ ಹತ್ಯೆಗೆ ಕಾರಣ ತಿಳಿಸಿದ ಶೂಟರ್​! - BABA SIDDIQUE MURDER PROBE

ABOUT THE AUTHOR

...view details