ಅನಂತನಾಗ್ (ಜಮ್ಮು- ಕಾಶ್ಮೀರ):ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಸೆಪ್ಟೆಂಬರ್ 18 ರಂದು ಮೊದಲ ಹಂತದ ಮತದಾನ ನಡೆಯಲಿದೆ. ಇದಕ್ಕೂ ಮೊದಲು ರಾಜಕೀಯ ಪಕ್ಷಗಳು ಮತಕ್ಕಾಗಿ ಭರವಸೆಗಳ ಮಹಾಪೂರವನ್ನೇ ಹರಿಸುತ್ತಿವೆ. ಬಿಜೆಪಿ ಬಳಿಕ ಕಾಂಗ್ರೆಸ್ ಕೂಡ ಭರ್ಜರಿ ಘೋಷಣೆಗಳನ್ನು ಪ್ರಕಟಿಸಿದೆ.
ಬುಧವಾರ ಇಲ್ಲಿ ನಡೆದ ಸಮಾವೇಶದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಶ್ಮೀರದ ಜನರಿಗೆ ಐದು ಭರವಸೆಗಳನ್ನು ಘೋಷಿಸಿದ್ದಾರೆ. ಇದರಲ್ಲಿ ಮಹಿಳಾ ಉದ್ಯಮಿಗಳಿಗೆ 5 ಲಕ್ಷ ಬಡ್ಡಿ ರಹಿತ ಸಾಲ, ಪ್ರತಿ ಕುಟುಂಬಕ್ಕೆ 25 ಲಕ್ಷ ಆರೋಗ್ಯ ವಿಮೆ, ಮಹಿಳೆಗೆ ಮಾಸಿಕ 3 ಸಾವಿರ ರೂಪಾಯಿ, ಪ್ರತಿ ವ್ಯಕ್ತಿಗೆ 11 ಕೆಜಿ ಅಕ್ಕಿ ನೀಡುವುದಾಗಿ ಪ್ರಕಟಿಸಿದರು.
ಕೇಂದ್ರಾಡಳಿತ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫ್ರೆನ್ಸ್ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ, ಐದು ಮಹತ್ವದ ಯೋಜನೆಗಳನ್ನು ಜಾರಿಗೆ ತರಲಾಗುವುದು. ಕರ್ನಾಟಕದ ಮಾದರಿಯಲ್ಲಿ ಕುಟುಂಬದ ಮಹಿಳೆಗೆ ಮಾಸಿಕ 3 ಸಾವಿರ ನೀಡಲಾಗುವುದು. ಸಾರ್ವಜನಿಕ ವಿತರಣಾ ವ್ಯವಸ್ಥೆ ಮೂಲಕ ಪ್ರತಿ ವ್ಯಕ್ತಿಗೆ 11 ಕೆಜಿ ಧಾನ್ಯ ನೀಡುವುದನ್ನು ಪುನಃಸ್ಥಾಪನೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ನೀಡಿದ್ದ ವಲಸಿಗ ಕಾಶ್ಮೀರ ಪಂಡಿತರಿಗೆ ಪುನರ್ವಸತಿ ನೀಡಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಭರವಸೆ ನೀಡಿದರು.