ನವದೆಹಲಿ:ವೈದ್ಯಕೀಯ ಪ್ರವೇಶಾತಿ ಪರೀಕ್ಷೆ (ನೀಟ್-ಯುಜಿ) 2024ರ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪ ಪ್ರಕರಣ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಉಕ್ರೇನ್-ರಷ್ಯಾ ಯುದ್ಧ ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿ ನಡೆಯುತ್ತಿರುವ ಪ್ರಶ್ನೆ ಪತ್ರಿಕೆಗಳ ಸೋರಿಕೆಯನ್ನು ಅವರಿಗೆ ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.
ನೀಟ್ ಅವ್ಯವಹಾರ ಹಾಗೂ ಯುಜಿಸಿ-ನೆಟ್ ಪರೀಕ್ಷೆ ರದ್ದು ಸಂಬಂಧ ಇಂದು ಎಐಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು.
''ಚುನಾವಣೆಯ ನಂತರ ಪ್ರಧಾನಿ ಮೋದಿ ಮಾನಸಿಕವಾಗಿ ಕುಗ್ಗಿದ್ದಾರೆ. ಸರ್ಕಾರವನ್ನು ನಡೆಸಲು ಅವರು ಹೆಣಗಾಡುತ್ತಿದ್ದಾರೆ. ದೇಶದ ಶಿಕ್ಷಣ ಸಂಸ್ಥೆಗಳು ಆರ್‌ಎಸ್‌ಎಸ್ ಮತ್ತು ಬಿಜೆಪಿ ನಾಯಕರ ಕೈವಶದಲ್ಲಿವೆ. ಅಲ್ಲಿಂದ ಅವರನ್ನು ಬದಲಾಯಿಸದ ಹೊರತು ಪೇಪರ್ ಸೋರಿಕೆ ನಿಲ್ಲದು'' ಎಂದು ಟೀಕಿಸಿದರು.
''ನಾನು ಭಾರತ್ ಜೋಡೋ ಯಾತ್ರೆ ನಡೆಸಿದ ಸಂದರ್ಭದಲ್ಲಿ ಪ್ರಶ್ನ ಪತ್ರಿಕೆ ಸಂಬಂಧ ಸಾವಿರಾರು ದೂರುಗಳನ್ನು ಕೇಳಿದ್ದೇನೆ. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಚಿಂತಿತರಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರದಲ್ಲಿ ವ್ಯಾಪಂ ಹಗರಣ ನಡೆದಿತ್ತು. ಇದನ್ನೇ ಮೋದಿ ಮತ್ತವರ ಸರ್ಕಾರ ದೇಶದಾದ್ಯಂತ ವಿಸ್ತರಿಸುತ್ತಿದೆ. ಮೋದಿ ಅವರು ಉಕ್ರೇನ್-ರಷ್ಯಾ ಯುದ್ಧ, ಇಸ್ರೇಲ್-ಗಾಜಾ ಸಂಘರ್ಷವನ್ನು ನಿಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ದೇಶದಲ್ಲಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯನ್ನು ಅವರಿಗೆ ತಡೆಯಲು ಸಾಧ್ಯವಾಗುತ್ತಿಲ್ಲವೋ ಅಥವಾ ಇದನ್ನು ತಡೆಯಲು ಇಚ್ಛಿಸುತ್ತಿಲ್ಲವೋ'' ಎಂದು ಕುಟುಕಿದರು.
''ಈಗ ಪರೀಕ್ಷೆಯೊಂದರ ಬಗ್ಗೆ ತನಿಖೆ ನಡೆಯುತ್ತಿದೆ. ಮತ್ತೊಂದು ಪರೀಕ್ಷೆಯನ್ನೇ ರದ್ದು ಮಾಡಲಾಗಿದೆ. ಇದ್ಯಾವುದೂ ವಿಷಯವಲ್ಲ. ಇದರ ಹೊಣೆಗಾರಿಕೆಯನ್ನು ಯಾರಾದರೂ ಹೊರಬೇಕು. ಅಂಥವರನ್ನು ಬಂಧಿಸಿ, ಕಠಿಣ ಕ್ರಮ ಜರುಗಿಸಬೇಕು. ಪ್ರಶ್ನೆ ಪತ್ರಿಕೆಗಳ ಸೋರಿಕೆ ಸಂಬಂಧ ನಾವು ಸಂಸತ್ತಿನಲ್ಲೂ ಧ್ವನಿ ಎತ್ತುತ್ತೇವೆ'' ಎಂದು ರಾಹುಲ್ ಗಾಂಧಿ ತಿಳಿಸಿದರು.
ಇದನ್ನೂ ಓದಿ:ಬೆಂಗಳೂರು IISc ಪ್ರವೇಶ ಪಡೆದ ಜೆಇಇ ಅಡ್ವಾನ್ಸ್ಡ್ - ನೀಟ್ ಪರೀಕ್ಷೆಯ ಟಾಪರ್