ನವದೆಹಲಿ: ಹವಾಮಾನ ಬದಲಾವಣೆ ಸಮಸ್ಯೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿರುವ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ.ಚಂದ್ರಚೂಡ್, ದೈನಂದಿನ ಜೀವನದಲ್ಲಿ ಪರಿಸರ ಸ್ನೇಹಿ ಜೀವನಶೈಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ದೆಹಲಿಯ ಕರ್ಕರ್ ದೂಮಾ, ಶಾಸ್ತ್ರಿ ಪಾರ್ಕ್ ಮತ್ತು ರೋಹಿಣಿ ಪ್ರದೇಶಗಳಲ್ಲಿ ಮಂಗಳವಾರ ಹೊಸ ನ್ಯಾಯಾಲಯದ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಜೆಐ ಚಂದ್ರಚೂಡ್, ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ಎರಡು ಬಾರಿ ಬೀಸಿದ ಬಿಸಿಗಾಳಿಯ ಅಲೆಗಳು ಹಾಗೂ ನಂತರದಲ್ಲಿ ದಾಖಲೆಯ ಮಳೆಯಾಗಿದ್ದನ್ನು ಉಲ್ಲೇಖಿಸಿದರು.
"ಈ ವರ್ಷ ದೆಹಲಿಯು ದಾಖಲೆಯ ಅತ್ಯಧಿಕ ಬಿಸಿ ಹವಾಮಾನಕ್ಕೆ ಸಾಕ್ಷಿಯಾಗಿದೆ. ನಮ್ಮ ಮೂಲಸೌಕರ್ಯಗಳು ನಮ್ಮ ಜೀವನದ ವಾಸ್ತವಗಳನ್ನು ಪ್ರತಿ ಬಿಂಬಿಸುವಂತಿರಬೇಕು. ಹವಾಮಾನ ಬದಲಾವಣೆ ಸಮಸ್ಯೆಯನ್ನು ಇನ್ನು ನಿರ್ಲಕ್ಷಿಸುವಂತಿಲ್ಲ. ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವುದು ಸೇರಿದಂತೆ ನಮ್ಮ ದೈನಂದಿನ ಜೀವನದಲ್ಲಿ ಹಸಿರು ಜೀವನಶೈಲಿ ಅಳವಡಿಸಿಕೊಳ್ಳುವುದು ಒಂದು ನಿರ್ಣಾಯಕ ಹೆಜ್ಜೆಯಾಗಿದೆ" ಎಂದು ಅವರು ನುಡಿದರು.
ಹೊಸದಾಗಿ ಉದ್ಘಾಟನೆಯಾಗುತ್ತಿರುವ ನ್ಯಾಯಾಲಯ ಕಟ್ಟಡಗಳು ಜಿಆರ್ಐಎಚ್ಎ-ರೇಟೆಡ್ ಆಗಿದ್ದು, ಶಾಖವನ್ನು ಕಡಿಮೆ ಮಾಡುತ್ತವೆ ಮತ್ತು ಪರಿಸರಕ್ಕೆ ಕಡಿಮೆ ಹಾನಿ ಮಾಡುತ್ತವೆ ಎಂಬುದು ಸಂತೋಷದ ವಿಷಯವಾಗಿದೆ ಎಂದು ಸಿಜೆಐ ಹೇಳಿದರು. ಗ್ರೀನ್ ರೇಟೆಡ್ ಇಂಟಿಗ್ರೇಟೆಡ್ ಹ್ಯಾಬಿಟಾಟ್ ಅಸೆಸ್ಮೆಂಟ್ (ಜಿಆರ್ಐಎಚ್ಎ) ಇದು ಕೆಲ ರಾಷ್ಟ್ರೀಯವಾಗಿ ಸ್ವೀಕಾರಾರ್ಹ ಪರಿಸರ ಮಾನದಂಡಗಳನ್ನು ಆಧರಿಸಿ ತಮ್ಮ ಕಟ್ಟಡದ ಕಾರ್ಯಕ್ಷಮತೆ ನಿರ್ಣಯಿಸಲು ಜನರಿಗೆ ಸಹಾಯ ಮಾಡುವ ರೇಟಿಂಗ್ ಸಾಧನವಾಗಿದೆ.