ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಲೋಕಸಭೆಯಲ್ಲಿ ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ಅಧಿವೇಶನದ ಎರಡನೇ ದಿನದಂದು ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವರು ಸಂಸತ್ತಿನ ಕೆಳಮನೆಯಾದ ಲೋಕಸಭೆಯಲ್ಲಿ ಬೆಳಗ್ಗೆ 11 ಗಂಟೆಯಿಂದ ಮಧ್ಯಂತರ ಬಜೆಟ್ ಮಂಡನೆ ಪ್ರಾರಂಭಿಸಲಿದ್ದಾರೆ.
ಏಪ್ರಿಲ್ - ಜುಲೈ ಅವಧಿಯ ವೆಚ್ಚಗಳನ್ನು ಪೂರೈಸಲು ಕೇಂದ್ರ ಸರ್ಕಾರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ಮಧ್ಯಂತರ ಬಜೆಟ್ ಮಂಡಿಸುತ್ತಿದೆ. ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೂರ್ಣ ಪ್ರಮಾಣದ ಬಜೆಟ್ ಮಂಡನೆಯಾಗಲಿದೆ.
ಗುರುವಾರದ ಬಜೆಟ್ ಮಂಡನೆ ಸಂಪೂರ್ಣ ಕಾಗದರಹಿತ ಪ್ರಕ್ರಿಯೆಯಾಗಿರಲಿದೆ. ಮಧ್ಯಂತರ ಕೇಂದ್ರ ಬಜೆಟ್ 2024ರ ಸಿದ್ಧತೆ ಪ್ರಕ್ರಿಯೆಯ ಅಂತಿಮ ಹಂತವನ್ನು ಸೂಚಿಸುವ ಸಾಂಪ್ರದಾಯಿಕ ಹಲ್ವಾ ಸಮಾರಂಭವು ನವದೆಹಲಿಯ ನಾರ್ತ್ ಬ್ಲಾಕ್ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ಹಣಕಾಸು ರಾಜ್ಯ ಸಚಿವ ಡಾ.ಭಗವತ್ ಕಿಶನ್ರಾವ್ ಕರಾಡ್ ಅವರ ಸಮ್ಮುಖದಲ್ಲಿ ಜನವರಿ 24 ರಂದು ನಡೆಯಿತು.
ಬಜೆಟ್ ತಯಾರಿಕೆಯ "ಲಾಕ್-ಇನ್" ಪ್ರಕ್ರಿಯೆ ಪ್ರಾರಂಭವಾಗುವ ಮೊದಲು ಪ್ರತಿವರ್ಷ ಸಾಂಪ್ರದಾಯಿಕ ಹಲ್ವಾ ಸಮಾರಂಭ ನಡೆಸಲಾಗುತ್ತದೆ. ತಮ್ಮ ಸರ್ಕಾರವು ಚುನಾವಣಾ ವರ್ಷದಲ್ಲಿ ಮಧ್ಯಂತರ ಬಜೆಟ್ ಮಂಡಿಸುವ ಸಂಪ್ರದಾಯವನ್ನು ಮುಂದುವರಿಸುತ್ತಿದೆ ಎಂದು ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
"ಸಾಮಾನ್ಯವಾಗಿ ಚುನಾವಣಾ ದಿನಾಂಕ ಹತ್ತಿರವಿದ್ದಾಗ, ಪೂರ್ಣ ಬಜೆಟ್ ಮಂಡಿಸದಿದ್ದಾಗ, ನಾವು ಸಹ ಅದೇ ಸಂಪ್ರದಾಯವನ್ನು ಅನುಸರಿಸುತ್ತೇವೆ ಮತ್ತು ಹೊಸ ಸರ್ಕಾರ ರಚನೆಯಾದ ನಂತರ ಪೂರ್ಣ ಬಜೆಟ್ ಅನ್ನು ನಿಮ್ಮ ಮುಂದೆ ತರುತ್ತೇವೆ. ಈ ಬಾರಿ, ದೇಶದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಾಳೆ ನಮ್ಮೆಲ್ಲರ ಮುಂದೆ ಕೆಲ ಪ್ರಮುಖ ಅಂಶಗಳೊಂದಿಗೆ ತಮ್ಮ ಬಜೆಟ್ ಮಂಡಿಸಲಿದ್ದಾರೆ" ಎಂದು ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಬಜೆಟ್ ಅಧಿವೇಶನಕ್ಕೆ ಮುಂಚಿತವಾಗಿ ಸುದ್ದಿಗಾರರಿಗೆ ತಿಳಿಸಿದರು.
ಖಾಸಗಿ ಹೂಡಿಕೆ ಈಗಲೂ ದುರ್ಬಲವಾಗಿರುವುದರಿಂದ ಮುಂಬರುವ ಮಧ್ಯಂತರ ಬಜೆಟ್ನಲ್ಲಿ ಬಂಡವಾಳ ವೆಚ್ಚದ ಮೇಲೆ ಸರ್ಕಾರ ಗಮನ ಹರಿಸುವ ಅಗತ್ಯವಿದೆ ಎಂದು ನೀತಿ ಆಯೋಗದ ಮಾಜಿ ಉಪಾಧ್ಯಕ್ಷ ರಾಜೀವ್ ಕುಮಾರ್ ಬುಧವಾರ ಹೇಳಿದ್ದಾರೆ. ಮಧ್ಯಂತರ ಬಜೆಟ್ನಿಂದ ತಮ್ಮ ಪಕ್ಷಕ್ಕೆ ಯಾವುದೇ ನಿರೀಕ್ಷೆಗಳಿಲ್ಲ ಎಂದು ಪ್ರತಿಪಕ್ಷ ಕಾಂಗ್ರೆಸ್ ಹೇಳಿದೆ. ಬಜೆಟ್ ನಿಂದ ಪಕ್ಷಕ್ಕೆ ಹೆಚ್ಚಿನ ನಿರೀಕ್ಷೆಗಳಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ರಾಜೀವ್ ಶುಕ್ಲಾ ಹೇಳಿದರು.
ಇದನ್ನೂ ಓದಿ :ಫೆಬ್ರವರಿಯಿಂದ 'ಸೇಮ್ ಡೇ ಡೆಲಿವರಿ' ನೀಡಲಿದೆ ಫ್ಲಿಪ್ಕಾರ್ಟ್