ನವದೆಹಲಿ: ''ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳು ಇದೀಗ ಭಾರತದೊಂದಿಗೆ ಚಲನಶೀಲತೆ ಒಪ್ಪಂದಗಳನ್ನು ಮಾಡಿಕೊಳ್ಳಲು ಆಸಕ್ತಿ ತೋರಿಸುತ್ತಿವೆ'' ಎಂದು ವಿದೇಶಾಂಗ ವ್ಯವಹಾರಗಳ ಸಚಿವ (ಇಎಎಂ) ಎಸ್. ಜೈಶಂಕರ್ ಹೇಳಿದರು.
ನವದೆಹಲಿಯಲ್ಲಿ ಶುಕ್ರವಾರ ನಡೆದ 2024ರ CII ವಾರ್ಷಿಕ ವ್ಯಾಪಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, "ಇಂದಿನ ಆರ್ಥಿಕತೆಯ ಯುಗದಲ್ಲಿ ಭಾರತೀಯ ಕೌಶಲ್ಯ ಮತ್ತು ಪ್ರತಿಭೆಯ ಪಾತ್ರವನ್ನು ಸಹ ಮರುಮೌಲ್ಯಮಾಪನ ಮಾಡಲಾಗುತ್ತಿದೆ. ತಾಂತ್ರಿಕ ಪ್ರಗತಿಯ ಸ್ವರೂಪವು ಹೆಚ್ಚಿನ ಬೇಡಿಕೆಯನ್ನು ಸೃಷ್ಟಿಸುತ್ತಿದೆ. ಆದರೆ, ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜನಸಂಖ್ಯೆ ಕೊರತೆ ಇದೆ. ಭಾರತದೊಂದಿಗೆ ಚಲನಶೀಲತೆ ಒಪ್ಪಂದಗಳನ್ನು ಮಾಡಿಕೊಳ್ಳಲು ಅಭಿವೃದ್ಧಿ ಹೊಂದಿದ ದೇಶಗಳು ಆಸಕ್ತಿ ತೋರುತ್ತಿವೆ'' ಎಂದರು.
''ನಾವೀನ್ಯತೆ ಮತ್ತು ಸ್ಟಾರ್ಟ್-ಅಪ್ ಸಂಸ್ಕೃತಿ ಹರಡುವುದು ಮೋದಿ ಸರ್ಕಾರದ ಚಿಂತನೆಯಾಗಿದೆ. ಇದರಿಂದ ಅಭಿವೃದ್ಧಿ ಹೊಂದಿದ ದೇಶಗಳು ಮೋದಿ ಯೋಚನೆಗಳನ್ನು ಬೆಂಬಲಿಸಿವೆ. ಜೊತೆಗೆ ನಮ್ಮ ಮಾನವ ಸಂಪನ್ಮೂಲಗಳ ಉನ್ನತೀಕರಣದಲ್ಲಿ ವ್ಯಾಪಾರಗಳಿಗೆ ನ್ಯಾಯಯುತ ಪಾಲು ಲಭಿಸಬೇಕಿದೆ'' ಎಂದು ವಿವರಿಸಿದರು.
ವಿದೇಶಗಳಲ್ಲಿಯೂ ಸಹ ಭಾರತೀಯ ನಾಗರಿಕರನ್ನು ಸುರಕ್ಷಿತಗೊಳಿಸುವ ಬಾಧ್ಯತೆಯನ್ನು ಪ್ರತಿಪಾದಿಸಿದ ಸಚಿವರು, ಉಕ್ರೇನ್ ಮತ್ತು ಸುಡಾನ್‌ನಿಂದ ಭಾರತೀಯ ನಾಗರಿಕರನ್ನು ಸ್ಥಳಾಂತರಿಸಲು ಭಾರತದ ಯಶಸ್ವಿ ಕಾರ್ಯಾಚರಣೆಗಳನ್ನು ಎತ್ತಿ ತೋರಿಸಿದರು. ಭಾರತವನ್ನು ನಾವೀನ್ಯತೆ, ಸಂಶೋಧನೆ ಮತ್ತು ವಿನ್ಯಾಸಕ್ಕಾಗಿ ಜಾಗತಿಕ ಕೇಂದ್ರವನ್ನಾಗಿ ಮಾಡುವುದು ನಮ್ಮ ಗುರಿಯಾಗಿದೆ ಎಂದು ಭರವಸೆ ನೀಡಿದರು.