ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): 2030ರ ವೇಳೆಗೆ ಬಹು ರಾಷ್ಟ್ರಗಳಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಗಣನೀಯವಾದ ಹೆಚ್ಚಳ ಕಾಣಲಿದೆಯಂತೆ. ಈ ಜಗತ್ತಿನ ಜನಸಂಖ್ಯೆ ಬದಲಾವಣೆ ಕುರಿತು ಜಾಗತಿಕ ವ್ಯವಹಾರ ಪ್ರಕಾಶನವಾದ CEOWORLD ಎಂಬ ಸಂಸ್ಥೆಯ ಇತ್ತೀಚಿನ ಅಧ್ಯಯನ ಹೇಳಿದೆ. ಈ ಅಧ್ಯಯನವು ಗಮನಾರ್ಹ ಬದಲಾವಣೆಗಳಿಗೆ ಸಿದ್ಧವಾಗಿರುವ ದೇಶಗಳ ಬಗ್ಗೆಯೂ ಬೆಳಕು ಚೆಲ್ಲಿದೆ.
ಅಧ್ಯಯನದ ಪ್ರಕಾರ, ಭಾರತದ ಮುಸ್ಲಿಂ ಜನಸಂಖ್ಯೆಯು 2020 ಮತ್ತು 2030ರ ನಡುವೆ 35.62 ಮಿಲಿಯನ್ನಷ್ಟು ಏರಿಕೆಯಾಗುವ ನಿರೀಕ್ಷೆ ಇದೆ. 2050ರ ವೇಳೆಗೆ ಭಾರತವು ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾದ ಇಂಡೋನೇಷ್ಯಾವನ್ನು ಮೀರಿಸುವ ಹಾದಿಯಲ್ಲಿದೆ. ಈಗ ಭಾರತವು ಜಾಗತಿಕ ಮುಸ್ಲಿಂ ಜನಸಂಖ್ಯೆಯಲ್ಲಿ ಪ್ರಸ್ತುತ ಮೂರನೇ ಸ್ಥಾನದಲ್ಲಿದೆ. ಮುಂಬರುವ ದಶಕಗಳಲ್ಲಿ ಭೌಗೋಳಿಕ ರಾಜಕೀಯ ಭೂದೃಶ್ಯವನ್ನು ಮರುರೂಪಿಸಬಹುದಾದ ಜನಸಂಖ್ಯಾ ಬದಲಾವಣೆಯನ್ನು ಕಾಣಲಿದೆಯಂತೆ. ಆದರೆ, ಭಾರತವು ಇಸ್ಲಾಮಿಕ್ ಸಹಕಾರ ಸಂಘಟನೆಯ (Organisation of Islamic Cooperation - OIC) ಸದಸ್ಯ ರಾಷ್ಟ್ರವಾಗಿಲ್ಲ ಎಂಬುದು ಗಮನಾರ್ಹ.
ನೆರೆಯ ಪಾಕಿಸ್ತಾನದಲ್ಲಿ ಒಟ್ಟು ಜನಸಂಖ್ಯೆಯ ಶೇ.96.5ರಷ್ಟು ಜನರು ಮುಸ್ಲಿಮರಿದ್ದಾರೆ. ಹಿಂದೂಗಳು ಮತ್ತು ಕ್ರಿಶ್ಚಿಯನ್ನರ ಅನುಪಾತವು ಕ್ರಮವಾಗಿ ಶೇ.1.9 ಮತ್ತು ಶೇ.1.6ರಷ್ಟಿದೆ. ಭಾರತದಲ್ಲಿ 2030ರ ವೇಳೆಗೆ ಸುಮಾರು 30 ಮಿಲಿಯನ್ ಮುಸ್ಲಿಮರ ಜನಸಂಖ್ಯೆ ಹೆಚ್ಚಾಗುವ ನಿರೀಕ್ಷೆಯ ಹೊರತಾಗಿಯೂ, ದೇಶದೊಳಗಿನ ಧಾರ್ಮಿಕ ವೈವಿಧ್ಯತೆಯು ಸುಭದ್ರವಾಗಿ ಉಳಿಯುತ್ತದೆ ಎಂದು ಅಧ್ಯಯನವು ತಿಳಿಸಿದೆ.