ನವದೆಹಲಿ: ಭಾರತ ಮತ್ತು ಫ್ರಾನ್ಸ್ ನಡುವಿನ ವ್ಯೂಹಾತ್ಮಕ ಸಹಭಾಗಿತ್ವವು ದೃಢವಾಗಿ ಬೆಳೆಯುತ್ತಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೋಮವಾರ ಹೇಳಿದ್ದಾರೆ. ಇದಕ್ಕೂ ಮುನ್ನ ಸಚಿವ ಜೈಶಂಕರ್ ಅವರು ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಪ್ರಧಾನ ಕಾರ್ಯದರ್ಶಿ ಅನ್ನೆ - ಮೇರಿ ಡೆಸ್ಕೊಟೆಸ್ ಅವರನ್ನು ದೆಹಲಿಯಲ್ಲಿ ಸ್ವಾಗತಿಸಿದರು.
ಫ್ರಾನ್ಸ್ನೊಂದಿಗೆ ವಿದೇಶಾಂಗ ಸಚಿವಾಲಯದ ಚರ್ಚೆಗಳು ಮತ್ತು ಕಾರ್ಯತಂತ್ರದ ಸಂವಾದಗಳು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ದೃಢವಾಗಿಸಲಿವೆ ಎಂದು ಸಚಿವ ಜೈಶಂಕರ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ಇಂದು ಬೆಳಗ್ಗೆ ಫ್ರಾನ್ಸ್ನ ಪ್ರಧಾನ ಕಾರ್ಯದರ್ಶಿ ಅನ್ನಿ- ಮೇರಿ ಡೆಸ್ಕೋಟೆಸ್ ಅವರು ಭಾರತಕ್ಕೆ ಆಗಮಿಸಿರುವುದು ಸಂತೋಷದ ವಿಷಯ. ನಮ್ಮ ವ್ಯೂಹಾತ್ಮಕ ಪಾಲುದಾರಿಕೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ವಿದೇಶಾಂಗ ಕಚೇರಿಯ ಚರ್ಚೆಗಳು ಮತ್ತು ಕಾರ್ಯತಂತ್ರದ ಸಂವಾದಗಳು ಅದರ ವೇಗವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂಬ ವಿಶ್ವಾಸವಿದೆ" ಎಂದು ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
1998 ರಲ್ಲಿ ವ್ಯೂಹಾತ್ಮಕ ಪಾಲುದಾರಿಕೆ ಆರಂಭಿಸುವುದರೊಂದಿಗೆ ಭಾರತ ಫ್ರಾನ್ಸ್ ಸಂಬಂಧಗಳು ಶಿಕ್ಷಣ, ವ್ಯಾಪಾರ ಹಾಗೂ ರಕ್ಷಣಾ ವಲಯಗಳ ಸೇರಿದಂತೆ ಇನ್ನಿತರ ಕ್ಷೇತ್ರಗಳಲ್ಲಿ ವಿಶಾಲವಾಗಿ ಬೆಳೆದಿವೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು 2018 ರ ನಂತರ ಗಣರಾಜ್ಯೋತ್ಸವದಂದು ಮೂರನೇ ಬಾರಿ ಭಾರತಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ರೊಬೊಟಿಕ್ಸ್, ಕೃತಕ ಬುದ್ಧಿಮತ್ತೆ, ಸ್ವಯಂ ಚಾಲಿತ ವಾಹನಗಳು, ಪ್ಲಾಟ್ ಫಾರ್ಮ್ಗಳು ಮತ್ತು ಸೈಬರ್ ರಕ್ಷಣೆಯಲ್ಲಿ ದ್ವಿಪಕ್ಷೀಯ ಸಹಯೋಗ ಹೆಚ್ಚಿಸುವ ಗುರಿಯೊಂದಿಗೆ ಸಮಗ್ರ ರಕ್ಷಣಾ ಕೈಗಾರಿಕಾ ಮಾರ್ಗಸೂಚಿ ಬಗ್ಗೆ ಚರ್ಚಿಸಲಾಯಿತು.