ಕೋಲ್ಕತ್ತಾ (ಪಶ್ಚಿಮ ಬಂಗಾಳ): ಲೋಕಸಭೆ ಚುನಾವಣೆಯು ಮಹತ್ವದ ಘಟ್ಟ ತಲುಪಿದೆ. ಈಗಾಗಲೇ ನಾಲ್ಕು ಹಂತಗಳ ಮತದಾನ ಮುಕ್ತಾಯವಾಗಿದ್ದು, ಇನ್ನೂ ಮೂರು ಹಂತಗಳ ಮತದಾನ ಬಾಕಿಯಿದೆ. ಇದರ ನಡುವೆ ಕಾಂಗ್ರೆಸ್ ನೇತೃತ್ವದ 'ಇಂಡಿಯಾ' ಮೈತ್ರಿಕೂಟದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಕೇಂದ್ರದಲ್ಲಿ 'ಇಂಡಿಯಾ' ಮೈತ್ರಿಕೂಟವು ಸಮ್ಮಿಶ್ರ ಸರ್ಕಾರ ರಚಿಸಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಚಿನ್ಸುರಾದಲ್ಲಿಂದು ಲೋಕಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ 'ಇಂಡಿಯಾ' ಮೈತ್ರಿಕೂಟದ ಬಗ್ಗೆ ಮಮತಾ ಬ್ಯಾನರ್ಜಿ ಪ್ರಸ್ತಾಪಿಸಿ, ತಾವು ಮೈತ್ರಿಕೂಟದ ಜೊತೆಗಿರುವುದಾಗಿಯೂ ತಿಳಿಸಿದ್ದಾರೆ. ಈ ಲೋಕಸಭೆ ಚುನಾವಣೆ ಬಳಿಕ 'ಇಂಡಿಯಾ' ಮೈತ್ರಿಕೂಟವು ಸಮ್ಮಿಶ್ರ ಸರ್ಕಾರ ರಚನೆ ಮಾಡಲಿದೆ. ಕೇಂದ್ರದಲ್ಲಿ ಮೈತ್ರಿಕೂಟ ಸರ್ಕಾರ ರಚಿಸಿದರೆ, ಬಾಹ್ಯ ಬೆಂಬಲ ನೀಡುವುದಾಗಿಯೂ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಇಲ್ಲಿ (ಪಶ್ಚಿಮ ಬಂಗಾಳ) ನಮ್ಮೊಂದಿಗೆ ಸಿಪಿಎಂ ಮತ್ತು ಕಾಂಗ್ರೆಸ್ ಗಣನೆಗೆ ತೆಗೆದುಕೊಳ್ಳಬೇಡಿ. ಅವರು ನಮ್ಮೊಂದಿಗಿಲ್ಲ. ಬದಲಿಗೆ ಬಿಜೆಪಿ ಜೊತೆಗಿದ್ದಾರೆ. ನಾನು ಈಗ ದೆಹಲಿಯ ಬಗ್ಗೆ ಮಾತನಾಡುತ್ತಿದ್ದೇನೆ. 'ಇಂಡಿಯಾ' ಮೈತ್ರಿಕೂಟವನ್ನು ಮುನ್ನಡೆಸುವ ಮೂಲಕ ಸರ್ಕಾರವನ್ನು ರಚಿಸುತ್ತೇವೆ. ಎಲ್ಲ ಸಹಾಯದೊಂದಿಗೆ ನಾವು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡುತ್ತೇವೆ. ಇದರಿಂದ ಬಂಗಾಳದಲ್ಲಿರುವ ನನ್ನ ತಾಯಿ ಮತ್ತು ಸಹೋದರಿಯರು ಎಂದಿಗೂ ಯಾವುದೇ ತೊಂದರೆಗಳನ್ನು ಎದುರಿಸುವುದಿಲ್ಲ. ಇನ್ನೂ 100 ದಿನ ಕೆಲಸ ಮಾಡಿದರೆ ಮುಂದೆ ಯಾವುದೇ ಸಮಸ್ಯೆಯೂ ಇರುವುದಿಲ್ಲ ಎಂದು ಮಮತಾ ಬ್ಯಾನರ್ಜಿ ತಿಳಿಸಿದರು.