ಚಂಡೀಗಢ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ (ಎಂಎಸ್ಪಿ) ಕಾನೂನು ಖಾತರಿ ಸೇರಿದಂತೆ ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ತನ್ನ ಹಟಮಾರಿ ಧೋರಣೆಯನ್ನು ಬಿಟ್ಟು ಮಾತುಕತೆ ನಡೆಸುವಂತೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಗುರುವಾರ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ್ದಾರೆ.
ರೈತರೊಂದಿಗೆ ಮಾತನಾಡುವುದು ಕೇಂದ್ರದ ಕರ್ತವ್ಯ ಹಾಗೂ ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು ಎಂದು ಅವರು ಹೇಳಿದರು.
"ರೈತರೊಂದಿಗೆ ಮಾತನಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ಯಾವುದೇ ಸಮಸ್ಯೆಯನ್ನು ಮಾತುಕತೆಯ ಮೂಲಕ ಮಾತ್ರ ಪರಿಹರಿಸಬಹುದು. ಕೇಂದ್ರ ಸರ್ಕಾರ ತನ್ನ ಮೊಂಡುತನವನ್ನು ಬಿಡಬೇಕು" ಎಂದು ಮಾನ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಬ್ಯಾನರ್ ಅಡಿಯಲ್ಲಿ ರೈತರು ಫೆಬ್ರವರಿ 13ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖನೌರಿ ಗಡಿ ಸ್ಥಳಗಳಲ್ಲಿ ಕ್ಯಾಂಪ್ ಹೂಡಿದ್ದಾರೆ. ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಕೇಂದ್ರಕ್ಕೆ ಒತ್ತಾಯಿಸಲು ಪಂಜಾಬ್ ರೈತ ಮುಖಂಡ ಜಗಜಿತ್ ಸಿಂಗ್ ದಲ್ಲೆವಾಲ್ ನವೆಂಬರ್ 26 ರಿಂದ ಪಂಜಾಬ್ ಮತ್ತು ಹರಿಯಾಣ ನಡುವಿನ ಖನೌರಿ ಗಡಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಡಿಸೆಂಬರ್ 6 ಮತ್ತು 14 ರ ನಡುವೆ 101 ರೈತರ ಜಾಥಾ (ಗುಂಪು) ಮೂರು ಬಾರಿ ಕಾಲ್ನಡಿಗೆಯಲ್ಲಿ ದೆಹಲಿಗೆ ಮೆರವಣಿಗೆ ಮಾಡಲು ಪ್ರಯತ್ನಿಸಿದರೂ, ಹರಿಯಾಣದಲ್ಲಿ ಪೊಲೀಸರು ಅವರನ್ನು ತಡೆದಿದ್ದಾರೆ. ಇದಕ್ಕೂ ಮುನ್ನ ಬುಧವಾರ, ಹರಿಯಾಣ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ನಯಾಬ್ ಸಿಂಗ್ ಸೈನಿ, ಪಂಜಾಬ್ ನ ಎಎಪಿ ಸರ್ಕಾರವು ರಾಜ್ಯದ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಹೇಳಿದ್ದರು.
"ಪಂಜಾಬ್ ಸರ್ಕಾರವು ರೈತರಿಂದ ಎಂಎಸ್ಪಿ ದರದಲ್ಲಿ ಬೆಳೆ ಖರೀದಿಸುವುದನ್ನು ಆರಂಭಿಸಬೇಕು. ಈ ವಿಷಯದಲ್ಲಿ ಅವರಿಗೆ ಯಾವುದೇ ತೊಂದರೆ ಆಗಬಾರದು. ಪಂಜಾಬ್ ರೈತರು ಈಗ ಸಮಸ್ಯೆಯಲ್ಲಿರುವುದರಿಂದ ಪಂಜಾಬ್ ಸರ್ಕಾರವು ಮುಂದೆ ಬಂದು ರೈತರಿಂದ ಎಲ್ಲಾ ಬೆಳೆಗಳನ್ನು ಎಂಎಸ್ಪಿ ದರದಲ್ಲಿ ಖರೀದಿಸುವುದಾಗಿ ಘೋಷಿಸಬೇಕು" ಎಂದು ಸೈನಿ ಹೇಳಿದರು.
ಇದನ್ನೂ ಓದಿ : 'ಪಟಾಕಿ ನಿಷೇಧಿಸಿ'; ಯುಪಿ, ಹರಿಯಾಣ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚನೆ - BAN CRACKERS