ಶಿವಮೊಗ್ಗ: ದೇಶದ ಬೆನ್ನೆಲುಬಾಗಿರುವ ರೈತರ ಬೆನ್ನೆಲುಬಾಗಿ ಇಂದು ಹೈನೋದ್ಯಮ ಬೆಳೆದು ನಿಂತಿದೆ. ಇದು ಸಾವಿರಾರು ಕುಟುಂಬಗಳ ನಿರ್ವಹಣೆಗೆ ಸಹಾಯಕವಾಗಿದೆ. ಇಂತಹ ಹೈನುಗಾರಿಕೆಗೆ ರಾಜ್ಯ ಸರ್ಕಾರ ಪ್ರೋತ್ಸಾಹಧನ ನೀಡದೆ ಇರುವುದರಿಂದ ಹೊರೆಯಾಗಿ ಪರಿಣಮಿಸಿದೆ. ಹೀಗಾಗಿ, ಅನೇಕ ರೈತರು ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ.
ಎರಡು ಹಸು, ಎಮ್ಮೆಗಳಿದ್ರೆ ಸಾಕು ಒಂದು ಕುಟುಂಬ ಚೆನ್ನಾಗಿಯೇ ಜೀವನ ನಡೆಸಿಕೊಂಡು ಹೋಗಬಹುದಾಗಿತ್ತು. ಆದರೆ ಇತ್ತೀಚೆಗೆ ಹಾಲು ಉತ್ಪಾದನೆ ಕಡಿಮೆ ಆಗುತ್ತಿದೆ. ಇದಕ್ಕೆ ಕಾರಣ ಹಾಲಿಗೆ ಪ್ರೋತ್ಸಾಹಧನ ಇಲ್ಲದೆ ಇರುವುದು. ಕಳೆದ ಐದಾರು ವರ್ಷಗಳಿಂದ ರೈತರಿಗೆ ಯಾವುದೇ ಪ್ರೋತ್ಸಾಹಧನ ಸಿಕ್ಕಿಲ್ಲ. ಇದರಿಂದ ಹಾಲು ಉತ್ಪಾದಕರು ನಿರಾಸೆಗೆ ಒಳಗಾಗುತ್ತಿದ್ದು, ಹೈನುಗಾರಿಕೆಯನ್ನು ಬಿಟ್ಟು ಬೇರೆ ಕಡೆ ಮುಖ ಮಾಡುತ್ತಿದ್ದಾರೆ.
ಶಿವಮೊಗ್ಗ, ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಶಿಮೂಲ್ಗೆ ಪ್ರತೀ ತಿಂಗಳು 7.89 ಸಾವಿರ ಲೀಟರ್ ಹಾಲು ಬರುತ್ತಿದೆ. ಈ ಹಾಲಿಗೆ ಇದುವರೆಗೂ ಸಹ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿಲ್ಲ. ಇದರಿಂದ ಹಾಲು ಉತ್ಪಾದಕರಿಗೆ ನಷ್ಟ ಉಂಟಾಗುತ್ತಿದೆ. ಅಲ್ಲದೆ ದಿನೇ ದಿನೇ ಪಶು ಆಹಾರದ ದರ ಏರಿಕೆ ಆಗುತ್ತಿದೆ. ಹಾಲು ಉತ್ಪಾದಕನಿಗೆ ತನ್ನ ಕೂಲಿಯೂ ಸಹ ಬಾರದ ಸ್ಥಿತಿ ಇದೆ. ಇದರಿಂದ ರಾಜ್ಯ ಸರ್ಕಾರ ಹಾಲಿಗೆ ಪ್ರೋತ್ಸಾಹಧನ ನೀಡುವ ಕುರಿತು ಸಮಾಲೋಚಿಸಬೇಕಾಗಿ ಹಾಲು ಉತ್ಪಾದಕರು ಆಗ್ರಹಿಸಿದ್ದಾರೆ.
"ಬಯಲು ಸೀಮೆ ಸೇರಿದಂತೆ ರಾಜ್ಯದ ಇತರೆ ಭಾಗದಲ್ಲಿ ಹೈನುಗಾರಿಕೆ ಅತೀ ದೊಡ್ಡ ಉದ್ಯಮವಾಗಿದೆ. ಹೆಣ್ಣು ಮಕ್ಕಳು ಹೈನುಗಾರಿಕೆಯನ್ನು ಸ್ವಂತ ಉದ್ಯಮವನ್ನಾಗಿಸಿಕೊಂಡಿದ್ದಾರೆ. ಇದರಿಂದ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಪ್ರತಿ ದಿನ ಹಣ ಸಿಗುವ ಗ್ಯಾರಂಟಿ ಆದಾಯದ ಮೂಲವಾಗಿದೆ. ಹಿಂದೆ ಎಲ್ಲಾ ಸರ್ಕಾರಗಳು ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಹಾಲಿಗೆ ಗ್ರಾಹಕನಿಗೂ ತೊಂದರೆ ಆಗದ ಹಾಗೆ, ಉತ್ಪಾದಕನಿಗೂ ತೊಂದರೆ ಆಗದ ಹಾಗೆ ಉತ್ಪಾದನ ವೆಚ್ಚವೆಂದು ಪ್ರತೀ ಲೀಟರ್ಗೆ ಹೊಂದಾಣಿಕೆ ಹಣವನ್ನು ನೀಡುತ್ತಿತ್ತು. ಆದರೆ ಹಲವು ವರ್ಷಗಳಿಂದ ಕೆಎಂಎಫ್ ಹಾಗೂ ಹೈನುಗಾರಿಕಾ ಸಚಿವರು ಯೋಚಿಸದೆ ಇರುವುದು ದುರಂತ. ಇಂದು ಪಶುಪಾಲನಾ ವೆಚ್ಚ ದುಬಾರಿ ಆಗುತ್ತಿದೆ. ಮೇವಿನ ಬೆಲೆ ಏರಿಕೆ ಆಗುತ್ತಿದೆ. ಕೆಎಂಎಫ್ನಿಂದ ರಾಸುಗಳಿಗೆ ನೀಡುವ ಆಹಾರದ ದರವನ್ನು ಪ್ರತೀ ಮೂರು ತಿಂಗಳಿಗೊಮ್ಮ ಏರಿಸುತ್ತಾ ಹೋಗುತ್ತಿದ್ದಾರೆ. ಸಮನಾಂತರವಾಗಿ ಬೆಂಬಲ ಬೆಲೆಯನ್ನು ಕೊಡದೇ ಇದ್ದರೆ, ಗ್ರಾಹಕರಿಗೆ ದುಬಾರಿ ಆಗುತ್ತದೆ. ಇದರಿಂದ ರಾಜ್ಯ ಸರ್ಕಾರ ಹೈನುಗಾರಿಕೆ ಪ್ರೋತ್ಸಾಹಧನವನ್ನು ನೀಡಬೇಕು" ಎಂದು ರೈತ ಸಂಘದ ಮುಖಂಡ ಕೆ.ಟಿ.ಗಂಗಾಧರ್ ಒತ್ತಾಯಿಸಿದ್ದಾರೆ.
ಹಾಲು ಉತ್ಪಾದಕ ರಾಘವೇಂದ್ರ ಅವರು ಮಾತನಾಡಿ, "ಹಾಲಿಗೆ ಕಳೆದ ಹಲವು ವರ್ಷಗಳಿಂದ ಬೆಲೆಯೇ ಇಲ್ಲ. ಹಾಲು ಹಾಕಲು ಡೈರಿ ಅಂತ ಮಾಡಿದ್ದಾರೆ. ರೈತರಿಗೆ ಸಮಸ್ಯೆ ಉಂಟಾಗುತ್ತಿದೆ. ಪ್ರೋತ್ಸಾಹಧನವನ್ನು ಒಮ್ಮೆ ನೀಡಿದ್ದು ಬಿಟ್ಟರೆ ಮತ್ತೆ ನೀಡಿಲ್ಲ. ಪ್ರೋತ್ಸಾಹಧನ ಎಂಬುದು ರೈತರ ಮೂಗಿಗೆ ತುಪ್ಪ ಹಚ್ಚಿದಂತೆ ಆಗಿದೆ. ಹಾಲಿನ ದರ 30 ರೂ. ಇದೆ. ಇದನ್ನೇ ಒಮ್ಮೆ ಏರಿಸುತ್ತಾರೆ, ಮತ್ತೆ ಇಳಿಸುತ್ತಾರೆ. ಹಾಲಿನ ಡೈರಿಯಿಂದ ರೈತರಿಗೆ ಯಾವುದೇ ಅನುಕೂಲವಿಲ್ಲ. ಇಂದು ರೈತ ಕೂಲಿಗೆ ಹೋದರೆ 500 ರೂ. ಸಿಗುತ್ತದೆ. ಆದರೆ ಹಾಲು ಹಾಕಿದ್ರೆ 100 ರೂ. ಉಳಿಯುತ್ತಿಲ್ಲ. ಜಾನುವಾರು ಸಾಕುವುದು ಕಷ್ಟಕರವಾಗಿದೆ. ಹುಲ್ಲಿನ ದರ, ಮೇವಿನ ದರ ಏರಿಕೆ ಆಗಿದೆ. ಇದರಿಂದ ಸರ್ಕಾರ ಹಾಲು ಉತ್ಪಾದಕರಿಗೆ ಪೋತ್ಸಾಹಧನ ನೀಡಬೇಕು" ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಮಕ್ಕಳ ಪ್ರೋತ್ಸಾಹ ಧನ 1 ರಿಂದ 2 ಲಕ್ಷ ರೂ.ಗೆ ಹೆಚ್ಚಳ: ಸಚಿವ ಮಹದೇವಪ್ಪ