ನವದೆಹಲಿ:ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ತೀಕ್ಷ್ಣ ವಾಗ್ದಾಳಿ ಮುಂದುವರೆಸಿದ್ದಾರೆ. ಇದೀಗ 'ಚಕ್ರವ್ಯೂಹ' ರೂಪಕವನ್ನು ಅಸ್ತ್ರವಾಗಿ ಬಳಸಿಕೊಂಡು ಟೀಕಾಪ್ರಹಾರ ನಡೆಸಿದ್ದಾರೆ.
''ಪ್ರಧಾನಿ ನರೇಂದ್ರ ಮೋದಿ ಸೇರಿ ಆರು ಜನರ ತಂಡ ಇಡೀ ದೇಶವನ್ನು 'ಚಕ್ರವ್ಯೂಹ'ದಲ್ಲಿ ಸಿಲುಕಿಸುವುದರೊಂದಿಗೆ ಎಲ್ಲೆಡೆ ಭಯದ ವಾತಾವರಣ ನಿರ್ಮಿಸುತ್ತಿದೆ. ಈ 'ಚಕ್ರವ್ಯೂಹ'ವನ್ನು ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಭೇದಿಸಲಿದೆ'' ಎಂದು ಹೇಳಿದ್ದಾರೆ.
2024-25ನೇ ಸಾಲಿನ ಬಜೆಟ್ ಕುರಿತು ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ರಾಹುಲ್ ಗಾಂಧಿ, ''ಕೇಂದ್ರ ಬಜೆಟ್ನ ಏಕೈಕ ಗುರಿ ಎಂದರೆ, ದೊಡ್ಡ ಉದ್ಯಮಿಗಳು, ರಾಜಕೀಯ ಏಕಸ್ವಾಮ್ಯವನ್ನು ಬಲಪಡಿಸುವುದು ಹಾಗೂ ಪ್ರಜಾಸತ್ತಾತ್ಮಕ ರಚನೆಯನ್ನು ನಾಶಪಡಿಸುವುದಾಗಿದೆ. ಅಲ್ಲದೇ, ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಲಾಗಿದೆ. ಆ ಭಯ ನಮ್ಮ ದೇಶದ ಪ್ರತಿಯೊಂದು ಅಂಶವನ್ನೂ ವ್ಯಾಪಿಸಿದೆ. ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಪ್ರಧಾನಿಯಾಗುವ ಕನಸು ಕಾಣಲು ಅವಕಾಶವಿದೆ. ರಕ್ಷಣಾ ಸಚಿವರು ಪ್ರಧಾನಿಯಾಗಲು ಬಯಸಿದರೆ, ಅಲ್ಲಿ ದೊಡ್ಡ ಸಮಸ್ಯೆ ಎದುರಾಗುತ್ತದೆ. ಇದೇ ಭಯವನ್ನೂ ದೇಶಾದ್ಯಂತ ಹರಡಲಾಗಿದೆ. ಬಿಜೆಪಿಯ ನನ್ನ ಸ್ನೇಹಿತರು, ಸಚಿವರಿಂದ ಹಿಡಿದು ರೈತರು, ಕಾರ್ಮಿಕರು ಯಾಕೆ ಭಯಭೀತರಾಗಿದ್ದಾರೆ'' ಎಂದು ಪ್ರಶ್ನಿಸಿದರು.
''ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ 'ಚಕ್ರವ್ಯೂಹ'ದಲ್ಲಿ ಆರು ಜನರು ಸೇರಿ ಅಭಿಮನ್ಯು ಸಿಲುಕಿಸಿ ಸಾಯಿಸಿದರು. ಈ 'ಚಕ್ರವ್ಯೂಹ'ದಲ್ಲಿ ಹಿಂಸೆ ಮತ್ತು ಭಯವಿದೆ. 'ಚಕ್ರವ್ಯೂಹ'ವನ್ನು 'ಪದ್ಮವ್ಯೂಹ' ಎಂದೂ ಕರೆಯಲಾಗುತ್ತದೆ. 21ನೇ ಶತಮಾನದಲ್ಲಿ ಮತ್ತೊಂದು ಈ 'ಚಕ್ರವ್ಯೂಹ' ಸಿದ್ಧಗೊಂಡಿದೆ. ಅದು ಕಮಲದ ರೂಪದಲ್ಲಿದ್ದು ಪ್ರಧಾನಿ (ನರೇಂದ್ರ ಮೋದಿ) ತಮ್ಮ ಎದೆಯ ಮೇಲೆ ಅದರ ಚಿಹ್ನೆ ಧರಿಸುತ್ತಾರೆ. ಅಂದು ಅಭಿಮನ್ಯುನೊಂದಿಗೆ ಏನಾಗಿತ್ತೋ, ಅದು ಇಂದು ಭಾರತ ಮತ್ತು ಅದರಲ್ಲಿನ ಯುವಕರು, ಮಹಿಳೆಯರು, ರೈತರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಆಗುತ್ತಿದೆ'' ಎಂದು ಆರೋಪಿಸಿದರು.
ಕೋಲಾಹಲ ಸೃಷ್ಟಿಸಿದ ಆರು ಹೆಸರು ಉಲ್ಲೇಖ: ಮುಂದುವರೆದು ಮಾತನಾಡಿ, ''ಇಂದು ಕೂಡ ಈ 'ಚಕ್ರವ್ಯೂಹ'ದ ಕೇಂದ್ರ ಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಆರು ಜನರಿದ್ದಾರೆ'' ಎಂದರು. ಇದೇ ವೇಳೆ, ಉಳಿದ ನಾಲ್ವರ ಹೆಸರನ್ನು (ಅದಾನಿ, ಅಂಬಾನಿ, ಅಜಿತ್ ದೋವಲ್ ಮತ್ತು ಮೋಹನ್ ಭಾಗವತ್) ಉಲ್ಲೇಖಿಸಿದರು. ಆದರೆ, ಆಗ ಸ್ಪೀಕರ್ ಓಂ ಬಿರ್ಲಾ ಮಧ್ಯಪ್ರವೇಶಿಸಿ, ''ಇತರರು ಸದನದ ಸದಸ್ಯರಲ್ಲ. ಆದ್ದರಿಂದ ಅವರ ಹೆಸರು ಉಲ್ಲೇಖಿಸಕೂಡದು'' ಎಂದು ಸೂಚಿಸಿದರು. ಈ ವೇಳೆ, ಪ್ರತಿಪಕ್ಷಗಳು ಹಾಗೂ ಆಡಳಿತ ಪಕ್ಷಗಳ ಸದಸ್ಯರ ನಡುವೆ ಕೋಲಾಹಲವೂ ಉಂಟಾಯಿತು.