ನವದೆಹಲಿ:ಕಿಸಾನ್ ಸಮ್ಮಾನ್ ಸಮ್ಮೇಳನ, ದಶಾಶ್ವಮೇಧ ಘಾಟ್‌ನಲ್ಲಿ ಗಂಗಾ ಆರತಿ ಮತ್ತು ಪ್ರಾರ್ಥನೆಯಲ್ಲಿ ಭಾಗವಹಿಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ನಿರ್ಮಾಣ ಹಂತದಲ್ಲಿರುವ ವಾರಾಣಸಿಯ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣಕ್ಕೆ ದಿಢೀರ್ ಭೇಟಿ ನೀಡಿ ಅಲ್ಲಿನ ಪ್ರಗತಿ ಪರಿಶೀಲನೆ ನಡೆಸಿದರು.
ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಧಾನಿ ಮೋದಿ, ಕಾಶಿಯ ಡಾ. ಸಂಪೂರ್ಣಾನಂದ ಕ್ರೀಡಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾಮಗಾರಿ ಪ್ರಗತಿಯನ್ನು ಪರಿಶೀಲನೆ ನಡೆಸಲಾಯಿತು. ಈ ಕ್ರೀಡಾಂಗಣ ಮತ್ತು ಕ್ರೀಡಾ ಸಂಕೀರ್ಣವು ಕಾಶಿಯ ಯುವಕರಿಗೆ ಹೆಚ್ಚು ಸಹಾಯ ಮಾಡುತ್ತದೆ." ಎಂದು ಅವರು ಹೇಳಿದ್ದಾರೆ. ಕ್ರೀಡಾಂಗಣಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪ್ರಧಾನಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು,
ಪಿಎಂ ಮೋದಿ ಅವರು ಹಂಚಿಕೊಂಡ ಚಿತ್ರಗಳಲ್ಲಿ ಕ್ರೀಡಾ ಸಂಕೀರ್ಣದ ಮಾದರಿಯ ಬಗ್ಗೆ ಅಧಿಕಾರಿಗಳೊಂದಿಗೆ ಇತರ ಸೌಲಭ್ಯಗಳನ್ನು ಪರಿಶೀಲಿಸುವುದನ್ನು ಕಾಣಬಹುದಾಗಿದೆ. ಫ್ಲಡ್‌ಲೈಟ್‌ಗಳು ಮತ್ತು ಹಚ್ಚ ಹಸಿರಿನ ಹೊರಾಂಗಣ ಸೌಲಭ್ಯಗಳೊಂದಿಗೆ ಕ್ರೀಡಾ ಸೌಲಭ್ಯವು ವಿಶ್ವದರ್ಜೆಯ ಮಾನದಂಡಗಳೊಂದಿಗೆ ರೆಡಿಯಾಗುತ್ತಿದೆ.
ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರು ವಾರಣಾಸಿಯಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿ, ಹ್ಯಾಟ್ರಿಕ್ ಪ್ರಧಾನಿ ಆಗುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಕಾಶಿಗೆ ಭೇಟಿ ನೀಡಿ ವಿಶ್ವನಾಥನ ದರ್ಶನ ಪಡೆದು, ವಾರಾಣಸಿಯ ಜನರಿಗೆ ಕೃತಜ್ಞತೆ ಸಲ್ಲಿಕೆ ಮಾಡಿದರು.
ಇದೇ ವೇಳೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 17ನೇ ಕಂತಿನ 20 ಸಾವಿರ ಕೋಟಿ ರೂಪಾಯಿ ನೆರವಿನ ಹಣವು 9.26 ಕೋಟಿ ರೈತರಿಗೆ ತಲುಪಲು ಚಾಲನೆ ನೀಡಿದರು. ಜೊತೆಗೆ, ಕೃಷಿ ವಿಸ್ತರಣಾ ಕಾರ್ಯಕರ್ತರಾಗಿ ಕೆಲಸ ಮಾಡಲು ತರಬೇತಿ ಪಡೆದ 30 ಸಾವಿರಕ್ಕೂ ಹೆಚ್ಚು ಮಹಿಳಾ ಸ್ವಸಹಾಯ ಗುಂಪುಗಳಿಗೆ ಪ್ರಮಾಣಪತ್ರವನ್ನೂ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶವು ಅಭೂತಪೂರ್ವ ಮತ್ತು ಇತಿಹಾಸ ಸೃಷ್ಟಿಸಿದೆ. ರೈತರು ಮತ್ತು ಬಡವರಿಗೆ ಸಂಬಂಧಿಸಿದ ಹೊಸ ಸರ್ಕಾರದ ಮೊದಲ ನಿರ್ಧಾರವಾಗಿ ನೆರವಿನ ಹಣವನ್ನು ಬಿಡುಗಡೆ ಮಾಡಲಾಗಿದೆ. ಕಾಶಿ ವಿಶ್ವನಾಥ, ಗಂಗಾಮಾತೆ ಮತ್ತು ಕಾಶಿಯ ಜನರ ಪ್ರೀತಿಯಿಂದ ನಾನು ಮೂರನೇ ಬಾರಿಗೆ ದೇಶದ 'ಪ್ರಧಾನ ಸೇವಕ'ನಾಗಿ ಆಯ್ಕೆಯಾಗಿದ್ದೇನೆ ಎಂದರು.
ಇದನ್ನು ಓದಿ:ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 9.26 ಕೋಟಿ ರೈತರಿಗೆ ಹಣ ಬಿಡುಗಡೆ; ಹೀಗೆ ಪರಿಶೀಲಿಸಿ - PM KISAN SAMMAN NIDHI YOJANA