ನವದೆಹಲಿ:ಮುಂದಿನ ಏಳು ದಿನಗಳಲ್ಲಿ ಪಶ್ಚಿಮ ಹಿಮಾಲಯ ಪ್ರದೇಶದಲ್ಲಿ ಸಾಧಾರಣ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಮುನ್ಸೂಚನೆ ನೀಡಿದೆ.
ಹವಾಮಾನ ಇಲಾಖೆಯ ಬೆಳಗಿನ ಬುಲೆಟಿನ್ ಪ್ರಕಾರ, ಜಮ್ಮು-ಕಾಶ್ಮೀರ-ಲಡಾಖ್-ಗಿಲ್ಗಿಟ್-ಬಾಲ್ಟಿಸ್ತಾನ್-ಮುಜಾಫರಾಬಾದ್, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಏಪ್ರಿಲ್ 3 ರಿಂದ 5 ರ ವರೆಗೆ ಮಳೆಯಾಗಲಿದೆಯಂತೆ. ಏಪ್ರಿಲ್ 4-5 ರ ವರೆಗೆ ಪಶ್ಚಿಮ ಉತ್ತರ ಪ್ರದೇಶದ ಪ್ರತ್ಯೇಕ ಸ್ಥಳಗಳಲ್ಲಿ ಗುಡುಗು ಮತ್ತು ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ಏಳು ದಿನಗಳಲ್ಲಿ ಛತ್ತೀಸ್‌ಗಢ, ತೆಲಂಗಾಣ, ಮರಾಠವಾಡ, ವಿದರ್ಭ, ಕೊಂಕಣ, ಗೋವಾ ಮತ್ತು ಏಪ್ರಿಲ್ 5-8 ರ ನಡುವೆ ಕೊಂಕಣ ಮತ್ತು ಗೋವಾ ಸೇರಿದಂತೆ ಇತರೆ ಕೆಲವು ಸ್ಥಳಗಳಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಹೇಳಿದೆ.
ಈಶಾನ್ಯದಲ್ಲಿ, ಅರುಣಾಚಲ ಪ್ರದೇಶದಲ್ಲಿ ಏಪ್ರಿಲ್ 2-5 ರ ನಡುವೆ ಮಳೆಯಾಗುತ್ತದೆ ಮತ್ತು ಏಪ್ರಿಲ್ 6-8 ರ ನಡುವೆ ಭಾರೀ ಮಳೆಯಾಗುವ ಸಾಧ್ಯತೆಗಳಿವೆ. ಏಪ್ರಿಲ್ 4-7 ರ ನಡುವೆ ಅಸ್ಸೋಂ ಮತ್ತು ಮಿಜೋರಾಂನಲ್ಲಿ ಭಾರೀ ಮಳೆ ನಿರೀಕ್ಷಿಸಲಾಗಿದೆ. ಅದೇ ರೀತಿ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳದ ಗಂಗಾನದಿ ಪ್ರದೇಶ, ಕರ್ನಾಟಕದ ಕರಾವಳಿ-ಉತ್ತರ-ದಕ್ಷಿಣ ಪ್ರದೇಶಗಳಲ್ಲಿಯೂ ಏಪ್ರಿಲ್ 5-8 ರ ನಡುವೆ ತುಂತುರು ಮಳೆಯಾಗುವ ಸಾಧ್ಯತೆಯಿದೆ.