ಜಮ್ಮು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಸಾಯುವುದಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿರುವಾಗ ಹಠಾತ್ತನೆ ಅಸ್ವಸ್ಥರಾಗಿ, ಕೆಲ ಹೊತ್ತಿನ ಬಳಿಕ ಚೇತರಿಸಿಕೊಂಡು ಅವರು ಈ ಮಾತು ಹೇಳಿದರು.
ರಾಜ್ಯ ವಿಧಾನಸಭಾ ಚುನಾವಣೆಯ ಮೂರನೇ ಮತ್ತು ಅಂತಿಮ ಹಂತದ ಪ್ರಚಾರದ ಕೊನೆಯ ದಿನದಂದು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, "ನಾವು ರಾಜ್ಯದ ಸ್ಥಾನಮಾನವನ್ನು ಪುನಃಸ್ಥಾಪಿಸಲು ಹೋರಾಡುತ್ತೇವೆ. ನನಗೆ 83 ವರ್ಷ ವಯಸ್ಸು, ಆದರೆ ನಾನು ಇಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ." ಎಂದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಎಂದಿಗೂ ಬಯಸಿರಲಿಲ್ಲ ಎಂದು ಹೇಳಿದ ಖರ್ಗೆ, "ಒಂದೊಮ್ಮೆ ಅವರು ಚುನಾವಣೆ ನಡೆಸಲು ಬಯಸಿದ್ದರೆ ಒಂದೆರಡು ವರ್ಷಗಳಲ್ಲಿಯೇ ಅದನ್ನು ಮಾಡುತ್ತಿದ್ದರು. ಸುಪ್ರೀಂ ಕೋರ್ಟ್ ಆದೇಶದ ನಂತರ ಅವರು ಚುನಾವಣೆಗೆ ತಯಾರಿ ಪ್ರಾರಂಭಿಸಿದರು. ಅವರಿಗೆ ಚುನಾವಣೆ ಬೇಕಿರಲಿಲ್ಲ. ಅವರು ಲೆಫ್ಟಿನೆಂಟ್ ಗವರ್ನರ್ ಮೂಲಕ ರಿಮೋಟ್ ಕಂಟ್ರೋಲ್ ಸರ್ಕಾರವನ್ನು ನಿರ್ವಹಿಸಲು ಬಯಸಿದ್ದರು." ಎಂದು ವಾಗ್ದಾಳಿ ನಡೆಸಿದರು.