ಶಿವಮೊಗ್ಗ: "ಈಶ್ವರಪ್ಪ ಅವರು ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತಾರೆ ಎಂಬ ನಂಬಿಕೆ ನಮಗಿಲ್ಲ. ಯಾಕಂದ್ರೆ, ಅವರು ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅವರು ಪಕ್ಷವನ್ನು ಹಾಳು ಮಾಡುತ್ತಾರೆ ಎಂಬ ನಂಬಿಕೆ ಇಲ್ಲ. ಆ ಕಾರ್ಯವನ್ನು ಮಾಡುವ ವಿಶ್ವಾಸವಿಲ್ಲ. ನೋವು, ಬೇಸರದಲ್ಲಿ ಅವರು ಹೇಳಿರಬಹುದು. ಆದರೆ ನಮ್ಮ ಹಿರಿಯರು, ರಾಷ್ಟ್ರೀಯ ನಾಯಕರು ಮಾತುಕತೆ ಮಾಡಿ ಪರಿಹಾರ ಮಾಡಿಕೊಳ್ಳುವ ವಿಶ್ವಾಸವಿದೆ" ಎಂದು ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪ ಹೇಳಿದ್ದಾರೆ.
ನಗರದಲ್ಲಿಂದು ಮಾತನಾಡಿದ ಅವರು, "ಈಶ್ವರಪ್ಪನವರು ಅಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ ಎಂದು ನನಗೆ ಅನ್ನಿಸುವುದಿಲ್ಲ. ಅವರು ಸ್ವರ್ಧೆ ಮಾಡುವ ಕುರಿತು ಹೇಳಿರಬಹುದು. ಆದರೆ, ಇನ್ನೂ ಎಲ್ಲ ಮುಗಿದಿಲ್ಲ. ಯಾರು ಯಾವಾಗ ಏನೇನು ಆಗುತ್ತಾರೆ ಗೊತ್ತಿಲ್ಲ. ನಾನು ಶಾಸಕನಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಸಂಘಟನೆ ತೀರ್ಮಾನ ಮಾಡಿತು. ನಂತರ ಎಲ್ಲರೂ ಸೇರಿ ಗೆಲ್ಲಿಸುವಂತಹ ಕೆಲಸ ಮಾಡಿದರು. ಈಶ್ವರಪ್ಪನವರು ಹಿರಿಯರು. ಎಲ್ಲರನ್ನು ಗೆಲ್ಲಿಸಿಕೊಳ್ಳುವಂತಹ ಶಕ್ತಿ ಈಶ್ವರಪ್ಪನವರಿಗೆ ಇದೆ" ಎಂದರು.
"ಸಂಘಟನೆಯನ್ನು ಗೆಲ್ಲಿಸಿಕೊಳ್ಳುವಂತಹ ಶಕ್ತಿ ಅವರಿಗಿದೆ. ಹಾಗಾಗಿ ಅವರು ಸಂಘಟನೆಯ ವಿರುದ್ಧ ಹೋಗುತ್ತಾರೆ ಎಂದು ನನಗನ್ನಿಸುವುದಿಲ್ಲ. ಅವರು ದೊಡ್ಡವರು, ದೊಡ್ಡವರಿಗೆ ಯಾರು ಸಮಾಧಾನ ಮಾಡುತ್ತಾರೆ. ನಾವು ಬಹಳ ಸಣ್ಣವರು. ರಾಜ್ಯದ ಅನೇಕ ಸಮಸ್ಯೆಗಳನ್ನು ಪರಿಹರಿಸಿದವರು ಈಶ್ವರಪ್ಪನವರು. ಪಕ್ಷದ ಹಿರಿಯ ಮುಖಂಡರು ಈಶ್ವರಪ್ಪ ಅವರ ಜೊತೆಗೆ ಮಾತನಾಡಿ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ ಎನ್ನುವ ವಿಶ್ವಾಸ ನನಗಿದೆ." ಎಂದರು.