ಹೈದರಾಬಾದ್: ರಾಜ್ಯದಲ್ಲಿ ನಡೆಯುತ್ತಿದ್ದ ಮಕ್ಕಳ ಕಳ್ಳಸಾಗಾಟದ ಅತಿ ದೊಡ್ಡ ಜಾಲವನ್ನು ರಾಚಕೊಂಡ ಪೊಲೀಸರು ಭೇದಿಸಿದ್ದು, 16 ಮಕ್ಕಳನ್ನು ರಕ್ಷಿಸಿದ್ದಾರೆ. ಈ ಬೆನ್ನಲ್ಲೇ ಮಕ್ಕಳನ್ನು ಕಳೆದುಕೊಂಡು ಆಂಧ್ರ ಮತ್ತು ತೆಲಂಗಾಣದ ಪೋಷಕರು ಠಾಣೆಗೆ ಕರೆ ಮಾಡಿ, ರಕ್ಷಿಸಿದ ಮಕ್ಕಳಲ್ಲಿ ನಮ್ಮ ಮಗು ಇದ್ಯಾ ಎಂದು ವಿಚಾರಣೆ ನಡೆಸುತ್ತಿದ್ದಾರೆ. ಜೊತೆಗೆ ರಕ್ಷಿಸಿದ ಮಕ್ಕಳನ್ನು ಅವರ ಪೋಷಕರಿಗೆ ಒಪ್ಪಿಸುವ ಕಾರ್ಯವನ್ನು ಕೂಡ ಪೊಲೀಸರು ನಿರ್ವಹಿಸುತ್ತಿದ್ದಾರೆ.
ರಾಚಕೊಂಡ ಪೊಲೀಸರು ಮಕ್ಕಳ ಕಳ್ಳ ಸಾಗಾಟ ಜಾಲ ಭೇದಿಸಿ, 16 ಮಕ್ಕಳನ್ನು ರಕ್ಷಿಸಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಮಕ್ಕಳ ಕುರಿತು ವಿಚಾರಣೆಗೆ ಠಾಣೆ ಕರೆ ಮಾಡುವ ಪೋಷಕರು ಸಂಖ್ಯೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಮಕ್ಕಳ ಅಗತ್ಯ ಮಾಹಿತಿಯೊಂದಿಗೆ ಆಗಮಿಸುವಂತೆ ಸೂಚಿಸುತ್ತಿದ್ದಾರೆ. ಈ ನಡುವೆ ಮಕ್ಕಳ ಕಳ್ಳಸಾಗಾಟ ರಾಕೆಟ್ ಜಾಲದ ಕುರಿತು ಸುದ್ದಿಗಳು ಕೂಡ ಜನರಲ್ಲಿ ಆತಂಕದ ಜೊತೆ ಶಾಕ್ ಮೂಡಿಸುತ್ತಿದೆ.
ಬೈಕ್ ಬಾಯ್, ಸ್ಕೂಟಿ ಗರ್ಲ್: ಬಂಧಿತರ ವಿಚಾರಣೆ ನಡೆಸುತ್ತಿದ್ದ ಪೊಲೀಸರಿಗೆ ಈ ಜಾಲ ನಿರ್ವಹಣೆ ತಂತ್ರ ಅಚ್ಚರಿ ಮೂಡಿಸಿದೆ. ಅದರಲ್ಲಿ ಈ ಜಾಲದಲ್ಲಿ ಮಹಿಳೆಯೊಬ್ಬರು ಪ್ರಮುಖ ಪಾತ್ರವಹಿಸಿದ್ದರು ಎಂಬುದಾಗಿ ಮೆಡಿಪಲ್ಲಿ ಪೊಲೀಸರು ಪತ್ತೆ ಮಾಡಿದ್ದಾರೆ. ಮಕ್ಕಳ ಕಳ್ಳಸಾಗಾಟದಲ್ಲಿ ಸಾರಿಗೆ ಬಳಕೆ ಮಾಡುವಾಗ ಯಾವುದೇ ಅನುಮಾನ ವ್ಯಕ್ತವಾಗದಿರಲೆಂದು ಕೆಲವು ಮಹಿಳೆಯರು ಮಗುವಿನ ತಾಯಿ ರೀತಿ ಪೋಸ್ ನೀಡಿ ಅವರ ಸಾಗಾಟ ಮಾಡುತ್ತಿದ್ದರು. ಅಲ್ಲದೇ, ಮಗು ಯಾವ ಲಿಂಗ ಎಂದು ಹೇಳಲು ಹುಡುಗರಿಗೆ ಬೈಕ್ ಮತ್ತು ಹುಡುಗಿಯರಿಗೆ ಸ್ಕೂಟಿ ಎಂಬ ಕೋಡ್ ವರ್ಡ್ ಬಳಕೆ ಮಾಡುತ್ತಿದ್ದರು. ಈ ಜಾಲದಲ್ಲಿ ಮೂರು ನಾಲ್ಕು ತಿಂಗಳ ಮಕ್ಕಳನ್ನು ಎರಡು ಮೂರು ದಿನದಲ್ಲಿ ಹೇಳಿದವರಿಗೆ, ಹೇಳಿದ ಸ್ಥಳದಲ್ಲಿ ಒಪ್ಪಿಸುತ್ತಿದ್ದರು.
ಫರ್ಟಿಲಿಟಿ ಕೇಂದ್ರಕ್ಕೆ ಬರುವ ದಂಪತಿಗಳು ಇವರ ಪ್ರಮುಖ ಗುರಿಯಾಗಿದ್ದು, ಅವರಿಗೆ ಮಾರಾಟ ಮಾಡುತ್ತಿದ್ದರು. ಪ್ರಕರಣದ ಪ್ರಮುಖ ಆರೋಪಿಗಳಾದ ಕಿರಣ್, ಪ್ರೀತಿ (ದೆಹಲಿ) ಮತ್ತು ಕನ್ನಯ್ಯಾ (ಪುಣೆ) ಮಕ್ಕಳನ್ನು ರಾತ್ರಿಹೊತ್ತು ಸಾಗಾಟ ಮಾಡುತ್ತಿದ್ದರು.
ಅಕ್ರಮ ವಲಸೆ:ಈ ಬಂಧನದ ಸುದ್ದಿ ತಿಳಿಯುತ್ತಿದ್ದಂತೆ, ಮುಂಬೈ ಪೊಲೀಸರು ರಾಚಕೊಂಡ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ತಮ್ಮಲ್ಲಿರುವ ದಾಖಲೆಗಳನ್ನು ಪ್ರಕರಣಗಳೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಕೆಲವು ಆರೋಪಿಗಳು ಕಳೆದ ಐದು ವರ್ಷದಿಂದ ಅಕ್ರಮವಾಗಿ ಮಕ್ಕಳ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ, ವಿಜಯವಾಡದ ಶಾರದಾ ಇದರಲ್ಲಿ ಪ್ರಮುಖರಾಗಿದ್ದಾರೆ. ಈಕೆ ಮೇಲೆ ಈಗಾಗಲೇ ಮಕ್ಕಳ ಮಾರಾಟದ ಮೂರು ಪ್ರಕರಣಳಿವೆ. ಇತ್ತೀಚೆಗೆ ಮುಂಬೈನ ಕಂಜುಮರ್ಗ್ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದೆ.
ವಿಜಯವಾಡದ 8 ಆರೋಪಿಗಳು: ಆರೋಪಿಗಳು ನೀಡಿದ ಮಾಹಿತಿ ಅನುಸಾರ, ವಿಜಯವಾಡದಲ್ಲಿ 8 ಏಜೆಂಟ್ಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಬಲಗಮ್, ಸರೋಜಾಮ ಮುದವತ್ ಶಾರದಾ, ಪಥನ್ ಮುಮ್ತಾಜ್, ಜಗನ್ನಾಥಮ್ ಎಂಬ ಆರೋಪಿಗಳನ್ನು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ವಿಜಯವಾಡ, ಪುಣೆ ಮತ್ತು ದೆಹಲಿಯಲ್ಲಿ ಕೂಡ ವಿಶೇಷ ತಂಡವನ್ನು ರಚಿಸಿ ತನಿಖೆ ನಡೆಸಲಾಗುತ್ತಿದೆ. ದೆಹಲಿ ಮತ್ತು ಪುಣೆಯಿಂದ 60ಕ್ಕೂ ಹೆಚ್ಚು ಮಕ್ಕಳನ್ನು ತಂದು ಮಾರಾಟ ಮಾಡಲಾಗಿದೆ ಎಂಬ ಶಂಕೆಗಳಿವೆ. ಮದಿಪಲ್ಲಿ ಪೊಲೀಸರು 16 ಮಕ್ಕಳನ್ನು ಪತ್ತೆ ಮಾಡಿದ್ದು, 44 ಮಕ್ಕಳಿಗಾಗಿ ಶೋಧ ನಡೆಸಲಾಗಿದೆ. ಮಕ್ಕಳನ್ನು ಮಾರಾಟ ಮಾಡುವಾಗ ಆರೋಪಿಗಳು ಮಾರಾಟಗಾರರೊಂದಿಗೆ ಬಾಂಡ್ಪೇಪರ್ ಒಪ್ಪಂದ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಅಳುತ್ತಿರುವ ಸಣ್ಣ ಮಕ್ಕಳು: ರಕ್ಷಿಸಿದ 16 ಮಕ್ಕಳಲ್ಲಿ 14 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ)ಗೆ ಒಪ್ಪಿಸಲಾಗಿದೆ. ಎರಡು ಮಕ್ಕಳ ಗುರುತು ಪತ್ತೆಯಾಗಿಲ್ಲ. 14 ಮಕ್ಕಳನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದು, ಆರೋಗ್ಯಯುತರಾಗಿದ್ದಾರೆ. ಪ್ರಕರಣದ ಕುರಿತು ಮಾತನಾಡಿರುವ ಸಿಡಬ್ಲೂಸಿ ಆಯುಕ್ತರಾದ ಕಾಂತಿ ವೆಸ್ಲಿ, ಅಪರಿಚಿತ ಸ್ಥಳವಾಗಿರುವ ಹಿನ್ನಲೆ ಕೆಲವು ಮಕ್ಕಳು ಅಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸುಮೋಟೋ ಪ್ರಕರಣ ದಾಖಲಿಸಿದ ಎಸ್ಸಿಪಿಸಿಆರ್ : ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಮಂಡಳಿ (ಎಸ್ಸಿಪಿಸಿಆರ್) ಮಕ್ಕಳ ಕಳ್ಳ ಸಾಗಾಟ ಪ್ರಕರಣದಲ್ಲಿ ಸುಮೋಟೋ ಪ್ರಕರಣ ದಾಖಲಿಸಿಕೊಂಡಿದೆ. ಸುದ್ದಿ ಪತ್ರಿಕೆಗಳ ಲೇಖನಗಳ ಪರಿಶೀಲನೆ ನಡೆಸಿದೆ. ಈ ಮಕ್ಕಳ ಕಳ್ಳ ಸಾಗಾಣೆ ಜಾಲದ ಕುರಿತು ತನಿಖೆ ನಡೆಸಿ ಕ್ರಮ ನಡೆಸಲಾಗುವುದು ಎಂದು ಎಸ್ಸಿಪಿಸಿಆರ್ ಮುಖ್ಯಸ್ಥ ಶ್ರೀನಿವಾಸ್ ತಿಳಿಸಿದ್ದಾರೆ.
ಇದನ್ನೂ ಓದಿ:ಭಾರತದ ಸೇನೆಗೆ ಬಂತು ಮತ್ತಷ್ಟು ಬಲ; 'ರುದ್ರಂ-2' ಕ್ಷಿಪಣಿ ಪರೀಕ್ಷಾರ್ಥ ಹಾರಾಟ ಯಶಸ್ವಿ