ಕರ್ನಾಟಕ

karnataka

ETV Bharat / bharat

ಮಹಿಳೆಯಂತೆ ನಟಿಸಿ ವಂಚನೆ ಆರೋಪ: ಬೆಂಗಳೂರು ಮೂಲದ ವ್ಯಕ್ತಿ ಬಂಧಿಸಿದ ಹೈದರಾಬಾದ್​​ ಪೊಲೀಸ್​ - Dating App Scam - DATING APP SCAM

ಡೇಟಿಂಗ್ ವೆಬ್‌ಸೈಟ್‌ ಮೂಲಕ ವಂಚನೆ ಎಸಗುತ್ತಿದ್ದ ಬೆಂಗಳೂರಿನ 26 ವರ್ಷದ ಯುವಕನನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಆರೋಪಿ ರಿದ್ಧ್ ಬೇಡಿ, ಡೇಟಿಂಗ್ ಸೈಟ್‌ಗಳಿಂದ ಆಕರ್ಷಕ ಮಹಿಳೆಯರ ಫೋಟೋಗಳನ್ನು ಸಂಗ್ರಹಿಸಿ, ನಕಲಿ ಪ್ರೊಫೈಲ್‌ಗಳನ್ನು ಸೃಷ್ಟಿಸಿ, ಪುರುಷರೊಂದಿಗೆ ಚಾಟ್ ಮಾಡಿ, ಮಹಿಳೆಯಂತೆ ನಟಿಸಿ, ಭಾರಿ ಮೊತ್ತದ ಬೇಡಿಕೆ ಇಡುತ್ತಿದ್ದ.

Hyderabad Police Arrest Bengaluru Man For Conning NRIs On Dating Apps
ಸಾಂದರ್ಭಿಕ ಚಿತ್ರ (ETV Bharat)

By ETV Bharat Karnataka Team

Published : Sep 20, 2024, 4:28 PM IST

ಹೈದರಾಬಾದ್: ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಹೇಳಿ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಡೇಟಿಂಗ್ ಆ್ಯಪ್‌ಗಳಲ್ಲಿ ಆಮಿಷವೊಡ್ಡುತ್ತಿದ್ದ ಮತ್ತು ನಂತರ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಹಣ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ಬೆಂಗಳೂರಿನ ಮಾಜಿ ಟೆಕ್ಕಿಯನ್ನು ಹೈದರಾಬಾದ್ ಸೈಬರ್ ಕ್ರೈಂ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿರುವ ತನ್ನ ಮಗನನ್ನು ಬ್ಲ್ಯಾಕ್‌ಮೇಲ್ ಮಾಡಿ ಆತನಿಂದ ಸುಮಾರು 1,721 ಡಾಲರ್ ಸುಲಿಗೆ ಮಾಡಿರುವುದಾಗಿ ಹೈದರಾಬಾದ್ ನಿವಾಸಿಯೊಬ್ಬರು ನೀಡಿದ ದೂರಿನ ಮೇರೆಗೆ ಬ್ರೂಕ್‌ಫೀಲ್ಡ್ ನಿವಾಸಿ ರಿದ್ಧ್ ಬೇಡಿ (26) ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಲ್ಯಾಪ್‌ಟಾಪ್, ಎರಡು ಮೊಬೈಲ್ ಹಾಗೂ ಇತರೆ ಮೊಬೈಲ್ ಉಪಕರಣಗಳನ್ನು ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ವಲಸಿಗ ಭಾರತೀಯರೇ ಈತನ ಟಾರ್ಗೆಟ್​:ನಕಲಿ ಪ್ರೊಫೈಲ್‌ಗಳ ಮೂಲಕ ಆರೋಪಿಯು ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯಂತೆ ಪೋಸ್ ನೀಡಿ ಪುರುಷರೊಂದಿಗೆ ಸ್ನೇಹ ಬೆಳೆಸುತ್ತಿದ್ದ. ಖಾಸಗಿ ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ನಂಬಿಕೆ ಗಳಿಸುತ್ತಿದ್ದ. ವಲಸಿಗ ಭಾರತೀಯರೇ ಈತನ ಗುರಿಯಾಗಿತ್ತು. ಅದೇ ರೀತಿ ಆರೋಪಿಯು ಅಮೆರಿಕದ ಕ್ಯಾಲಿಫೋರ್ನಿಯಾದ ಎನ್‌ಆರ್‌ಐ ಜೊತೆ ಆನ್‌ಲೈನ್‌ನಲ್ಲಿ ಮಹಿಳೆಯಂತೆ ನಟಿಸಿ ಸ್ನೇಹ ಬೆಳೆಸಿದ್ದಾನೆ. ಬಳಿಕ ಖಾಸಗಿ ಫೋಟೋಗಳನ್ನು ಕಳುಹಿಸುವಂತೆ ಹೇಳಿದ್ದಾನೆ. ಇಂದೊಂದು ಮೋಸದ ಜಾಲವೆಂದು ತಿಳಿಯದೇ ಅನಿವಾಸಿ ಭಾರತೀಯನು ಚಾಟ್, ಸಂಭಾಷಣೆ, ಖಾಸಗಿ ಫೋಟೋ ಹಂಚಿಕೊಂಡಿದ್ದಾರೆ.

ವಂಚಕನು ಇವುಗಳನ್ನಿಟ್ಟುಕೊಂಡೇ ಬ್ಲ್ಯಾಕ್‌ಮೇಲ್‌ ಮಾಡಲು ಆರಂಭಿಸಿದ್ದಾನೆ. ಹಣ ಕೊಡದಿದ್ದರೆ ಖಾಸಗಿ ಫೋಟೋಗಳನ್ನು ಜಾಲತಾಣದಲ್ಲಿ ಅಪ್​ಲೋಡ್​ ಮಾಡುವುದಾಗಿ ಬೆದರಿಸಿದ್ದಾನೆ. ಇದಕ್ಕೆ ಹೆದರಿದ ಎನ್‌ಆರ್‌ಐ, ಆತ ಕೇಳಿದಂತೆ ಹಣ ನೀಡಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ವಂಚಕ ರಿದ್ಧ್ ಬೇಡಿ, ದೊಡ್ಡ ಮೊತ್ತದ ಬೇಡಿಕೆ ಇಟ್ಟಿದ್ದಾನೆ. ಇದರಿಂದ ಬೇಸತ್ತ ಎನ್‌ಆರ್‌ಐ, ತನ್ನ ತಾಯಿ ಮೂಲಕ ದೂರು ನೀಡಿದ್ದರು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತ ಆರೋಪಿಯು ಕ್ಯಾಲಿಫೋರ್ನಿಯಾದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದು, ಆರು ವರ್ಷಗಳ ಕಾಲ ಅಮೆರಿಕದಲ್ಲಿ ನೆಲೆಸಿ ಭಾರತಕ್ಕೆ ಮರಳಿದ್ದ. ಐಶಾರಾಮಿ ಜೀವನಶೈಲಿಗಾಗಿ ಸೈಬರ್ ಕ್ರೈಂ ಕೃತ್ಯಕ್ಕೆ ಇಳಿದಿದ್ದ. ನಕಲಿ ಸಿಮ್ ಕಾರ್ಡ್‌ಗಳು ಮತ್ತು ಜಿಮೇಲ್ ಖಾತೆಗಳನ್ನು ಬಳಸುತ್ತಿದ್ದ. ಹಗಲಿನಲ್ಲಿ ಮಲಗುತ್ತಿದ್ದ ಈತ, ರಾತ್ರಿ ತನ್ನ ಕೆಲಸವನ್ನು ಆರಂಭಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ವಿದೇಶಿ ಉದ್ಯೋಗದ ಹೆಸರಲ್ಲಿ ವಂಚನೆ: ಎಚ್ಚರಿಕೆ ವಹಿಸುವಂತೆ ಪೊಲೀಸರ ಮನವಿ, ಇಲ್ಲಿವೆ ಮುನ್ನೆಚ್ಚರಿಕೆ ಕ್ರಮಗಳು - Beware of Job Scams

ABOUT THE AUTHOR

...view details