ಆಗ್ರಾ (ಉತ್ತರಪ್ರದೇಶ):ಕೆಲವೊಮ್ಮೆ ಪತಿ - ಪತ್ನಿ ಮಧ್ಯೆ ಏನೇನೋ ಕಾರಣಕ್ಕೆ ಕಿತ್ತಾಟ ಸಂಭವಿಸುತ್ತವೆ. ಅದು ಎಲ್ಲ ಹಂತ ಮೀರಿ ವಿಚ್ಚೇದನದವರೆಗೂ ಬರುತ್ತವೆ. ಪತಿ ಪತ್ನಿಯನ್ನು, ಪತ್ನಿ ಪತಿಯನ್ನು ಇಷ್ಟಪಡಲು ಮತ್ತು ನಿರಾಕರಿಸಲು ಒಂದು ಸಕಾರಣ ಇರಬೇಕು. ಆದರೆ, ಇಲ್ಲೊಂದು ಪ್ರಕರಣ ವಿಚಿತ್ರವಾಗಿದೆ. ಪತ್ನಿಗೆ ಇಂಗ್ಲಿಷ್ ಬರಲ್ಲ ಎಂಬ ಕಾರಣಕ್ಕಾಗಿ ಪತಿ ಮಡದಿಯನ್ನೇ ಬೇಡ ಎಂದು ಹಠ ಹಿಡಿದಿದ್ದಾರೆ. ಇನ್ನು ವಿಶೇಷ ಅಂದ್ರೆ, ಜೋಡಿಯದ್ದು ಪ್ರೇಮವಿವಾಹ. ಅದೂ ಮೂರು ತಿಂಗಳ ಹಿಂದಷ್ಟೇ ಸಪ್ತಪದಿ ತುಳಿದಿದ್ದಾರೆ.
ನಿಜ, ಮೂರು ತಿಂಗಳ ಹಿಂದಷ್ಟೇ ಪ್ರೀತಿಸಿ ವಿವಾಹವಾದ ಜೋಡಿ ಇದೀಗ ಇಲ್ಲಿನ ಕೌಟುಂಬಿಕ ಸಲಹಾ ಕೇಂದ್ರದ ಮೆಟ್ಟಿಲೇರಿದ್ದಾರೆ. ಇಬ್ಬರ ಮಧ್ಯೆ ಅಂತ ದೊಡ್ಡ ಸಮಸ್ಯೆಯೇನೂ ಇಲ್ಲದಿದ್ದರೂ ಸಂವಹನ ನಡೆಸಲು ಬೇಕಾದ ಭಾಷೆಯೇ ಇವರಿಗೆ ಅಡ್ಡಿಯಾಗಿದೆ. ಪತ್ನಿ ಹಿಂದಿಯಲ್ಲಿ ಪಂಟರ್. ಪತಿಗೆ ಆಕೆ ಇಂಗ್ಲಿಷ್ನಲ್ಲೇ ಮಾತನಾಡಬೇಕು ಎಂಬ ಹಠ. ಇದೊಂದೇ ಕಾರಣ, ನವದಂಪತಿ ನಡುವೆ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿದೆ.
ಪ್ರೀತಿಯ ದ್ಯೋತಕ ತಾಜ್ಮಹಲ್ ಇರುವ ಆಗ್ರಾದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ. ಪ್ರೀತಿಸಿ ವಿವಾಹವಾಗಿದ್ದ ದಂಪತಿ ನಡುವೆ ಭಾಷೆ ಅಂತರ ಮೂಡಲು ಕಾರಣವಾಗಿದೆ. ದಕ್ಷಿಣ ಭಾರತದ ಯುವಕ ಇಲ್ಲಿನ ಯುವತಿಯನ್ನು ಗಾಂಧರ್ವ ವಿವಾಹವಾಗಿದ್ದ. ಖಾಸಗಿ ಬ್ಯಾಂಕ್ನ ಉದ್ಯೋಗಿಯಾದ ಆತ, ತರಬೇತಿಗಾಗಿ ಆಗ್ರಾಕ್ಕೆ ಬಂದಾಗ ಯುವತಿ ಜೊತೆ ಪ್ರೇಮಾಂಕುರವಾಗಿತ್ತು. ಬಳಿಕ ಇಬ್ಬರೂ ಕುಟುಂಬಸ್ಥರನ್ನು ಒಪ್ಪಿಸಿ ಸಪ್ತಪದಿ ತುಳಿದಿದ್ದರು.