ಲಖನೌ(ಉತ್ತರ ಪ್ರದೇಶ): ದೇಶದ ರಾಜಕೀಯದಲ್ಲಿ ದಶಕಗಳ ಬಳಿಕ ಈ ಬಾರಿಯ ಲೋಕಸಭೆಯು ವಿಶಿಷ್ಟ ಸನ್ನಿವೇಶಕ್ಕೆ ಸಾಕ್ಷಿಯಾಗಲಿದೆ. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್ ದಂಪತಿ ಒಟ್ಟಿಗೆ ಸಂಸತ್ತಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಬಿಹಾರದ ರಾಜೇಶ್ ರಂಜನ್ (ಪಪ್ಪು ಯಾದವ್) ಮತ್ತವರ ಪತ್ನಿ ರಂಜಿತ್ ರಂಜನ್ ಸಹ ಸಂಸತ್ತಿನ ಕೆಳಮನೆಯಲ್ಲಿ ಒಟ್ಟಿಗೆ ಕಾಣಸಿಗಲಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಲೋಕಸಭೆ ಚುನಾವಣೆಯು ಹಲವು ಆಸಕ್ತಿದಾಯಕ ಫಲಿತಾಂಶಗಳನ್ನು ನೀಡಿದೆ. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಪತಿ-ಪತ್ನಿ ಜೊತೆಯಾಗಿ ಸಂಸತ್ ಪ್ರವೇಶಿಸಿದ್ದಾರೆ. ಸಮಾಜವಾದಿ ಪಕ್ಷದ ಅಧ್ಯಕ್ಷ, ಮಾಜಿ ಸಿಎಂ ಅಖಿಲೇಶ್ ಮತ್ತವರ ಪತ್ನಿ, ಹಾಲಿ ಸಂಸದೆ ಡಿಂಪಲ್ ಯಾದವ್ ಕ್ರಮವಾಗಿ ಕನೌಜ್ ಮತ್ತು ಮೈನ್‌ಪುರಿ ಲೋಕಸಭಾ ಕ್ಷೇತ್ರದಿಂದ ಗೆಲುವು ಕಂಡಿದ್ದಾರೆ.
ಡಿಂಪಲ್ ಯಾದವ್ ಸತತ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ಮೈನ್‌ಪುರಿ ಕ್ಷೇತ್ರದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ, ಬಿಜೆಪಿಯ ಜೈವೀರ್ ಸಿಂಗ್ ಅವರನ್ನು 2.21 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ. ಮತ್ತೊಂದೆಡೆ, ಅಖಿಲೇಶ್ ಸಹ ಬಿಜೆಪಿ ಅಭ್ಯರ್ಥಿ ಸುಬ್ರತಾ ಪಾಠಕ್ ವಿರುದ್ಧ 1.70 ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಅಖಿಲೇಶ್ ಈ ಹಿಂದೆಯೂ ಮೂರು ಬಾರಿ ಸಂಸತ್ತಿಗೆ ಪ್ರವೇಶಿಸಿದ್ದರು.
ಪಪ್ಪು ಯಾದವ್-ರಂಜಿತ್ ರಂಜನ್ ಜೋಡಿ: ಬಿಹಾರದಿಂದ ಪಪ್ಪು ಯಾದವ್ ಹಾಗೂ ಅವರ ಪತ್ನಿ ರಂಜಿತ್ ರಂಜನ್ ಸಲ ಮತ್ತೊಮ್ಮೆ ಒಟ್ಟಿಗೆ ಸಂಸತ್ತಿಗೆ ಆಯ್ಕೆಯಾಗಿದ್ದಾರೆ. 2004ರ ಉಪಚುನಾವಣೆಯಲ್ಲಿ ಆರ್‌ಜೆಡಿ ಪಕ್ಷದಿಂದ ಮಾಧೇಪುರ ಕ್ಷೇತ್ರದಲ್ಲಿ ಪಪ್ಪು ಯಾದವ್ ಆಯ್ಕೆಯಾಗಿದ್ದರು. ಪತ್ನಿ ರಂಜಿತ್ ರಂಜನ್ ಅವರು ಲೋಕಜನ ಶಕ್ತಿ ಪಕ್ಷದಿಂದ ಸಹರ್ಸಾ ಕ್ಷೇತ್ರದಲ್ಲಿ ಗೆಲುವು ಕಂಡಿದ್ದರು. ಅಲ್ಲದೇ, 2014ರ ಚುನಾವಣೆಯಲ್ಲೂ ಈ ದಂಪತಿ ಗೆಲುವು ಸಾಧಿಸಿದ್ದರು.
ರಂಜಿತ್ ರಂಜನ್ ಕಾಂಗ್ರೆಸ್ ಪಕ್ಷದಿಂದ ಸುಪೌಲ್ ಕ್ಷೇತ್ರದಲ್ಲಿ ಗೆದ್ದಿದ್ದರು. ಆಗ ಪತಿ ಪಪ್ಪು ಯಾದವ್ ಮಾಧೇಪುರ ಲೋಕಸಭಾ ಕ್ಷೇತ್ರದಿಂದ ಮತ್ತೆ ಆರ್‌ಜೆಡಿ ಟಿಕೆಟ್‌ನಿಂದ ಗೆದ್ದು ಸಂಸದರಾಗಿದ್ದರು. ಪಪ್ಪು ಯಾದವ್ ವಿವಿಧ ರಾಜಕೀಯ ಪಕ್ಷಗಳಿಂದ 1991, 1996, 1999, 2004 ಮತ್ತು 2014ರಲ್ಲಿ ಬಿಹಾರದ ವಿವಿಧ ಲೋಕಸಭಾ ಕ್ಷೇತ್ರಗಳನ್ನು ಪ್ರತಿನಿಧಿಸಿದ್ದಾರೆ. 2015ರಲ್ಲಿ ಅತ್ಯುತ್ತಮ ಸಂಸದ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದರು.
ಈ ಬಾರಿ ಪಪ್ಪು ಯಾದವ್ ಮತ್ತು ರಂಜಿತ್ ರಂಜನ್ ದಂಪತಿ ಮತ್ತೆ ಗೆಲುವು ಕಂಡಿದ್ದಾರೆ. ಈ ಸಲವೂ ಇಬ್ಬರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಆದರೆ, ಪೂರ್ಣಿಯಾ ಕ್ಷೇತ್ರದಿಂದ ಪಪ್ಪು ಯಾದವ್ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಮತ್ತೊಂದೆಡೆ, ಪತ್ನಿ ರಂಜಿತ್ ರಂಜನ್ ಸುಪೌಲ್ ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದಾರೆ.
ಇದನ್ನೂ ಓದಿ:ಲೋಕಸಭೆ ಚುನಾವಣೆಯಲ್ಲಿ ಸೋತು ರಾಜ್ಯಸಭೆಗೆ ಕಣಕ್ಕಿಳಿದ ಅಜಿತ್ ಪವಾರ್ ಪತ್ನಿ ಸುನೇತ್ರಾ