ನವದೆಹಲಿ:ಬಜೆಟ್ಗೂ ಮುನ್ನ ಹಲ್ವಾ ತಯಾರಿಕೆಯಲ್ಲಿ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ಸಮುದಾಯಗಳ ಅಧಿಕಾರಿಗಳು ಯಾರೂ ಇರಲಿಲ್ಲ ಎಂಬ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ರಾಜ್ಯಸಭಾ ನಾಯಕ, ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಈ ಬಗ್ಗೆ ಕಿಡಿಕಾರಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ರಾಜೀವ್ ಗಾಂಧಿ ಪ್ರತಿಷ್ಠಾನದ ಮಂಡಳಿಯಲ್ಲಿ ಎಷ್ಟು ಜನ ಒಬಿಸಿ, ಎಸ್‌ಸಿ ಮತ್ತು ಎಸ್‌ಟಿ ನಾಯಕರಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ರಾಜ್ಯಸಭೆಯಲ್ಲಿ ಕೇಂದ್ರ ಬಜೆಟ್ ಮೇಲಿನ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಮೇಲ್ಮನೆಯ ನಾಯಕ ಜೆಪಿ ನಡ್ಡಾ ಅವರು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಎಷ್ಟು ಒಬಿಸಿಗಳಿದ್ದಾರೆ? ರಾಜೀವ್ ಗಾಂಧಿ ಫೌಂಡೇಶನ್‌ನ ಮಂಡಳಿಯಲ್ಲಿ ಎಷ್ಟು ಒಬಿಸಿ, ಎಸ್‌ಸಿ, ಎಸ್‌ಟಿಗಳಿದ್ದಾರೆ? ಯುಪಿಎ ಆಡಳಿತದಲ್ಲಿ ರಾಷ್ಟ್ರೀಯ ಸಲಹಾ ಸಮಿತಿಯಲ್ಲಿ ಎಷ್ಟು ಜನ ಒಬಿಸಿ, ಎಸ್‌ಸಿ, ಮತ್ತು ಎಸ್‌ಟಿಗಳಿದ್ದರು ಎಂಬುದನ್ನು ರಾಹುಲ್ ಗಾಂಧಿ ವಿವರಿಸಬೇಕು ಎಂದು ಸವಾಲು ಹಾಕಿದರು.
ಒಬಿಸಿ ಪರ ಮೊಸಳೆ ಕಣ್ಣೀರು:ಒಬಿಸಿ ಪರವಾಗಿದ್ದೇವೆ ಎಂದು ಬರಿ ಬಾಯಲ್ಲಿ ಹೇಳಿ, ಮೊಸಳೆ ಕಣ್ಣೀರು ಸುರಿಸುವುದರಿಂದ ಪ್ರಯೋಜನವಾಗದು. ಪ್ರಧಾನಿ ನರೇಂದ್ರ ಮೋದಿ ಅವರು ಮೂರು ಸಚಿವ ಸಂಪುಟದಲ್ಲಿ ಗರಿಷ್ಠ ಸಂಖ್ಯೆಯ ಒಬಿಸಿ ಮತ್ತು ಎಸ್ಸಿ / ಎಸ್ಟಿ ಸದಸ್ಯರು ಇದ್ದಾರೆ. ಮತಕ್ಕಾಗಿ ಕಾಂಗ್ರೆಸ್ ಒಬಿಸಿ (ಇತರ ಹಿಂದುಳಿದ ವರ್ಗಗಳ) ಚಾಂಪಿಯನ್ ಎಂದು ಬಿಂಬಿಸಿಕೊಳ್ಳಲು ಆರಂಭಿಸಿದೆ. ಮಂಡಲ್ ಆಯೋಗದ ವರದಿ ಬಗ್ಗೆ ರಾಜೀವ್ ಗಾಂಧಿ ಹೇಳಿದ್ದೇನು? ಆ ವ್ಯಕ್ತಿ ಅಂದು ಏಕೆ ಹಠಮಾರಿತನ ತೋರಿದರು ಎಂದು ಟೀಕಿಸಿದ್ದಾರೆ.