ಹೈದರಾಬಾದ್: ದೇಶದ ಅಭಿವೃದ್ಧಿಯಲ್ಲಿ ಇಂಜಿನಿಯರ್‌ಗಳ ಪಾತ್ರ ಭಾರಿ ಮಹತ್ವ ಪಡೆದುಕೊಂಡಿದೆ. ದೇಶದ ಶ್ರೇಷ್ಠ ಇಂಜಿನಿಯರ್, ರಾಜ ನೀತಿಜ್ಞ ಮೋಕ್ಷಗುಂಡಂ ವಿಶ್ವೇಶ್ವರಯ್ಯ ಅವರ ಜನ್ಮದಿನವನ್ನು ಗೌರವಿಸುವ ಸಲುವಾಗಿ ಸೆಪ್ಟೆಂಬರ್ 15 ಅನ್ನು 'ಎಂಜಿನಿಯರ್ ದಿನ' ಎಂದು ಆಚರಿಸಲಾಗುತ್ತಿದೆ.
1968 ರಲ್ಲಿ ಈ ದಿನದ ಆಚರಣೆ ಶುರು ಮಾಡಲಾಯಿತು. ಇದು ಭಾರತೀಯ ಶಿಕ್ಷಣದಲ್ಲಿ ವಿಶೇಷವಾಗಿ ದೇಶಾದ್ಯಂತ ಎಂಜಿನಿಯರಿಂಗ್ ಸಮುದಾಯಗಳಿಂದ ಆಚರಿಸಲ್ಪಟ್ಟ ಅತ್ಯಂತ ಮಹತ್ವದ ದಿನಗಳಲ್ಲಿ ಒಂದಾಗಿದೆ. ಸರ್ ಎಂ ವಿಶ್ವೇಶ್ವರಯ್ಯನವರ ಸಾಧನೆಗಳನ್ನು ತಿಳಿಸುವುದಕ್ಕಾಗಿ ಆಚರಿಸಲಾಗುತ್ತದೆ. ಶ್ರೀಲಂಕಾ ಮತ್ತು ತಾಂಜಾನಿಯಾದಲ್ಲೂ ಸೆಪ್ಟೆಂಬರ್ 15 ರಂದು ಎಂಜಿನಿಯರ್ಸ್ ಡೇ ಎಂದು ಆಚರಿಸಲಾಗುತ್ತದೆ.
ಯಾರಿವರು ಸರ್ ಎಂ ವಿಶ್ವೇಶ್ವರಯ್ಯ ?:ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ, ಸೆಪ್ಟೆಂಬರ್ 15, 1861 ರಂದು ಕರ್ನಾಟಕದ ಮುದ್ದೇನಹಳ್ಳಿಯಲ್ಲಿ ಜನಿಸಿದರು. 15 ನೇ ವಯಸ್ಸಿನಲ್ಲಿ, ಅವರು ಸಂಸ್ಕೃತ ಪಂಡಿತರಾಗಿದ್ದ ತಮ್ಮ ತಂದೆಯನ್ನು ಕಳೆದುಕೊಂಡರು. ಚಿಕ್ಕಬಳ್ಳಾಪುರದಲ್ಲಿ ತಮ್ಮ ಆರಂಭಿಕ ಶಿಕ್ಷಣವನ್ನು ಪೂರ್ಣಗೊಳಿಸಿದ ಇವರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರಿಗೆ ಬಂದರು. ಇಲ್ಲಿ ಹೈಸ್ಕೂಲ್, ಕಾಲೇಜು ಶಿಕ್ಷಣ ಮುಗಿಸಿ ಇಂಜಿನಿಯರಿಂಗ್ ಕಲಿಯಲು ಪುಣೆಯ ಸೈನ್ಸ್ ಕಾಲೇಜಿಗೆ ಸೇರಿದರು. 1883 ರಲ್ಲಿ ನಡೆದ ಪರೀಕ್ಷೆಯಲ್ಲಿ ಮೊದಲ ರ್ಯಾಂಕ್ ಪಡೆದು ರಾಜ್ಯಕ್ಕೆ ಕೀರ್ತಿಯನ್ನು ತಂದರು. ತಮ್ಮ ಶಿಕ್ಷಣ ಪೂರ್ಣಗೊಳಿಸಿದ ನಂತರ, ಅವರು ಆಗಿನ ಬಾಂಬೆ ಸರ್ಕಾರದಿಂದ ನಾಸಿಕ್‌ನಲ್ಲಿ ಸಹಾಯಕ ಇಂಜಿನಿಯರ್ ಹುದ್ದೆಯನ್ನು ಪಡೆದರು. ಎಂಜಿನಿಯರ್ ಆಗಿ ವಿವಿಧ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ತಮ್ಮ ಸಾಮರ್ಥ್ಯವನ್ನು ತೋರಿಸಿದರು.
ಅವರ ಈ ಯಶಸ್ಸಿನ ಬಳಿಕ ಅವರು ಸರ್ ಎಂವಿ ಎಂದೇ ಜನಪ್ರಿಯರಾದರು. ಇಂಜಿನಿಯರ್ಸ್ ಇಂಡಿಯಾ (IEI) ಪ್ರಕಾರ, ಅವರನ್ನು "ಭಾರತದಲ್ಲಿ ಆರ್ಥಿಕ ಯೋಜನೆಯ ಪುರೋಗಾಮಿ" ಎಂದೂ ಕರೆಯಲಾಯಿತು.
ಭಾರತೀಯ ಇಂಜಿನಿಯರಿಂಗ್ ಪಿತಾಮಹ: ಎಂ ವಿಶ್ವೇಶ್ವರಯ್ಯ ಅವರು 1912 ರಿಂದ 1918 ರವರೆಗೆ ಮೈಸೂರಿನ ದಿವಾನರಾಗಿದ್ದರು. ವಾಸ್ತವವಾಗಿ ಅವರು ಮೈಸೂರಿನ ಕೃಷ್ಣರಾಜ ಸಾಗರ ಅಣೆಕಟ್ಟಿನ ಹಿಂದಿನ ಮೆದುಳಾಗಿದ್ದಾರೆ. ಹೈದರಾಬಾದ್ ನಗರದ ಪ್ರವಾಹ ಸಂರಕ್ಷಣಾ ವ್ಯವಸ್ಥೆಯ ಮುಖ್ಯ ವಿನ್ಯಾಸಕರಾಗಿಯೂ ಇವರು ಜನಪ್ರೀಯರು. ಮೈಸೂರಿನ ನಾಲ್ವಡಿ ಕೃಷ್ಣ ರಾಜ ಒಡೆಯರ್, ರಾಜ್ಯದ ಆರ್ಥಿಕ ಸ್ಥಿತಿ ಗಂಭೀರವಾಗಿದ್ದರೂ ಬರಗಾಲದ ಸಮಯದಲ್ಲಿ ಅಣೆಕಟ್ಟನ್ನು ನಿರ್ಮಿಸಿದರು. ಹೀಗಾಗಿ ಅವರ ಗೌರವಾರ್ಥವಾಗಿ ಅಣೆಕಟ್ಟಿಗೆ ಹೆಸರಿಸಲಾಯಿತು.