ನವದೆಹಲಿ:ಐಎಲ್ಐ ಮತ್ತು ಎಸ್ಎಆರ್ಐ ಸೇರಿದಂತೆ ವಿವಿಧ ಉಸಿರಾಟ ಅಸ್ವಸ್ಥತೆಗಳ ಕುರಿತು ಕಣ್ಗಾವಲು ಹೆಚ್ಚಿಸುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಹಾಗೆಯೇ ಹ್ಯೂಮನ್ ಮೆಟಾನ್ಯೋಮೊವೈರಸ್ (ಎಚ್ಎಂಪಿವಿ) ಸೋಂಕಿನ ಪ್ರಕರಣಗಳು ಪತ್ತೆಯಾಗಿದ್ದು, ಹರಡದಂತೆ ಜಾಗೃತಿ ಮೂಡಿಸುವಂತೆಯೂ ತಿಳಿಸಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ಪುಣ್ಯ ಸಲಿಲ ಶ್ರೀವಾತ್ಸವ ಅವರ ನೇತೃತ್ವದಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳೊಂದಿಗೆ ಸೋಮವಾರ ವರ್ಚುಯಲ್ ಸಭೆ ನಡೆಯಿತು. ಈ ವೇಳೆ ಶ್ವಾಸಕೋಶದ ಅಸ್ವಸ್ಥತೆ ಮತ್ತು ಎಚ್ಎಂಪಿವಿ ಕುರಿತು ಎಲ್ಲಾ ಸಾರ್ವಜನಿಕ ಆರೋಗ್ಯ ಕ್ರಮಗಳ ನಿರ್ವಹಣೆ ಮಾಡುವಂತೆ ಸೂಚಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆರೋಗ್ಯ ಸಂಶೋಧನಾ ವಿಭಾಗದ ಡಾ.ರಾಜೀವ್ ಬಹಲ್, ಆರೋಗ್ಯ ಸೇವೆ ನಿರ್ದೇಶಕ ಡಾ.ಅತುಲ್ ಗೋಯೆಲ್, ಎನ್ಸಿಡಿಸಿ ತಜ್ಞರು ಮತ್ತು ಐಡಿಎಸ್ಪಿ ಹಾಗೂ ಐಸಿಎಂಆರ್, ಎನ್ಐವಿ ಹಾಗೂ ಐಡಿಎಸ್‌ಪಿಯ ರಾಜ್ಯ ಮೇಲ್ವಿಚಾರಣಾ ಘಟಕದ ಸಿಬ್ಬಂದಿ ಈ ಸಭೆಯಲ್ಲಿ ಭಾಗಿಯಾಗಿದ್ದರು.
ಚೀನಾದಲ್ಲಿ ಹರಡುತ್ತಿರುವ ಎಚ್ಎಂಪಿವಿ ಪ್ರಕರಣಗಳು ದೇಶದಲ್ಲಿ ವರದಿಯಾಗಿದ್ದು, ಕರ್ನಾಟಕದಲ್ಲಿ ಎರಡು, ತಮಿಳುಮಾಡು ಮತ್ತು ಗುಜರಾತ್ನಲ್ಲೂ ವರದಿಯಾಗಿದೆ. ಎಚ್ಎಂಪಿವಿ ಜಾಗತಿಕವಾಗಿ ಗುರುತಿಸಿರುವ ಶ್ವಾಸಕೋಶದ ವೈರಸ್ ಆಗಿದ್ದು, ಇದರಲ್ಲಿನ ಪ್ಯಾಥೋಜೆನ್ ಎಲ್ಲಾ ವಯಸ್ಸಿನ ಗುಂಪಿನಲ್ಲಿ ಶ್ವಾಸಕೋಶದ ಸೋಂಕಿಗೆ ಕಾರಣವಾಗುತ್ತದೆ.