ಲಾಹೌಲ್ ಮತ್ತು ಸ್ಪಿತಿ (ಹಿಮಾಚಲ ಪ್ರದೇಶ):ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮುಂದುವರೆದಿದೆ. ಕಾಜಾ, ಲಾಹೌಲ್ ಮತ್ತು ಸ್ಪಿತಿಯಲ್ಲಿ ಸಂಗಮ್ ನಲ್ಲೂಹ್ ಬಳಿ ಹಠಾತ್ ಪ್ರವಾಹ ಸೃಷ್ಟಿಯಾಗಿದೆ. ಅಬ್ಬರದ ಪ್ರವಾಹದಲ್ಲಿ ಮಹಿಳೆಯೊಬ್ಬರು ಕೊಚ್ಚಿಕೊಂಡು ಹೋಗಿದ್ದಾರೆ.
ಲಾಹೌಲ್ ಮತ್ತು ಸ್ಪಿತಿಯಲ್ಲಿರುವ ಜಿಲ್ಲಾ ತುರ್ತು ಕಾರ್ಯಾಚರಣೆ ಕೇಂದ್ರ (DEOC), ಹಠಾತ್ ಪ್ರವಾಹದ ನಂತರ ವಾಹನವೊಂದು ಅವಶೇಷಗಳಡಿಯಲ್ಲಿ ಹೂತು ಹೋಗಿದೆ ಎಂದು ಹೇಳಿದೆ. ಹಿಮಾಚಲ ಪ್ರದೇಶ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರದ ಪ್ರಕಾರ, "ಸಗ್ನಮ್ ನಲ್ಲುಹ್ ಬಳಿ ಹಠಾತ್ ಪ್ರವಾಹದ ಘಟನೆ ವರದಿಯಾಗಿದೆ. ಉಪ ವಿಭಾಗ ಸ್ಪಿತಿ, ಜಿಲ್ಲಾ ಲಾಹೌಲ್ ಮತ್ತು ಸ್ಪಿತಿ ಘಟನೆಯಲ್ಲಿ ಒಬ್ಬ ಮಹಿಳೆ ಕೊಚ್ಚಿಕೊಂಡು ಹೋಗಿದ್ದಾರೆ ಮತ್ತು ಒಂದು ವಾಹನವೂ ಅವಶೇಷಗಳ ಅಡಿಯಲ್ಲಿ ಸಿಲುಕಿದೆ.
ಐಪಿಸಿ 17ನೇ ಕಾರ್ಪ್ಸ್ ಮತ್ತು ಸ್ಥಳೀಯ ಪೊಲೀಸರನ್ನು ಒಳಗೊಂಡ ರಕ್ಷಣಾ ತಂಡವು ರಕ್ಷಣೆಗಾಗಿ ಘಟನೆಯ ಸ್ಥಳದಲ್ಲಿದೆ. ಅಲ್ಲದೇ ಸ್ಥಳದಲ್ಲಿ ಆಂಬ್ಯುಲೆನ್ಸ್ ಮತ್ತು ಜೆಸಿಬಿಯನ್ನು ನಿಯೋಜಿಸಲಾಗಿದೆ. ಹಿಮಾಚಲ ಪ್ರದೇಶದ ಕುಲು, ಮಂಡಿ ಮತ್ತು ಶಿಮ್ಲಾ ಪ್ರದೇಶಗಳಲ್ಲಿ ಮೇಘಸ್ಫೋಟ ಮತ್ತು ಹಠಾತ್ ಪ್ರವಾಹದ ನಂತರ ಒಟ್ಟು ಆರು ಜನರು ಸಾವನ್ನಪ್ಪಿದ್ದಾರೆ. 47 ಜನರು ನಾಪತ್ತೆಯಾಗಿದ್ದಾರೆ.
55 ಜನರ ಪರಿಹಾರ ಶಿಬಿರಕ್ಕೆ ಸ್ಥಳಾಂತರ:ಮೇಘಸ್ಫೋಟದಿಂದ ಮಂಡಿಯಲ್ಲಿ ಐವರು ಮೃತಪಟ್ಟಿದ್ದಾರೆ. ಕುಲು ಪ್ರದೇಶದಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಶಿಮ್ಲಾದಲ್ಲಿ ಇದುವರೆಗೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಶಿಮ್ಲಾದಲ್ಲಿ ಇದುವರೆಗೆ ಕಾಣೆಯಾದವರ ಸಂಖ್ಯೆ 33, ಕುಲು 9 ಮತ್ತು ಮಂಡಿಯಲ್ಲಿ 6 ಸೇರಿದಂತೆ ಒಟ್ಟು 55 ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ.