ಪಾಟ್ನಾ (ಬಿಹಾರ) :ಸಾಮಾನ್ಯವಾಗಿ ನ್ಯಾಯಾಲಯವೊಂದರಲ್ಲಿ ನೀಡಲಾಗುವ ತೀರ್ಪಿನಿಂದ ಕೆಲವೊಮ್ಮೆ ಜನಸಾಮಾನ್ಯರು ತಮ್ಮ ಅಸಮಾಧಾನ ವ್ಯಕ್ತಪಡಿಸುವುದನ್ನು ನೀವು ಹಲವಾರು ಬಾರಿ ನೋಡಿರಬಹುದು ಮತ್ತು ಕೇಳಿರಲೂಬಹುದು. ಆದರೆ ಇಲ್ಲೊಬ್ಬ ವಕೀಲರು ವಿಭಿನ್ನ ರೀತಿಯಲ್ಲಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ಇಡೀ ನ್ಯಾಯಾಲಯದ ಆವರಣದಲ್ಲಿ ಗೊಂದಲ ಸೃಷ್ಠಿಯಾಗಿತ್ತು. ಈ ಘಟನೆ ಜನರಲ್ಲಿ ಚರ್ಚೆಗೂ ಗ್ರಾಸವಾಗಿದೆ. ವಕೀಲರ ಹೈವೋಲ್ಟೇಜ್ ನಾಟಕ ಜನರನ್ನು ಕೆಲಕಾಲ ನಿಂತು ನೋಡುವಂತೆ ಮಾಡಿತು.
ಪಾಟ್ನಾ ಹೈಕೋರ್ಟ್‌ನಲ್ಲಿ ವಕೀಲರ ಹೈವೋಲ್ಟೇಜ್ ನಾಟಕ : ವಾಸ್ತವವಾಗಿ ವಕೀಲರು ಪಾಟ್ನಾ ಹೈಕೋರ್ಟ್‌ನ ಮೇಲ್ಛಾವಣಿಯಿಂದ ಬಾಲ್ಕನಿಗೆ ಜಿಗಿದಿದ್ದಾರೆ. ಅಲ್ಲಿಂದ ಅವರನ್ನು ಇತರ ವಕೀಲರು ಮತ್ತು ಪೊಲೀಸರ ಸಹಾಯದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಶಿವಪೂಜನ್ ಝಾ ಎಂಬ ವಕೀಲರೇ ನ್ಯಾಯಾಲಯದ ಆವರಣದಲ್ಲಿಯೇ ಆತ್ಮಹತ್ಯೆಗೆ ಯತ್ನಿಸಿ ಕೋಲಾಹಲ ಸೃಷ್ಟಿಸಿದ ಲಾಯರ್ ಆಗಿದ್ದಾರೆ. ವಿಷಯದ ಬಗ್ಗೆ ಮಾಹಿತಿ ಬಂದ ತಕ್ಷಣ, ಹೈಕೋರ್ಟ್ ಆವರಣದಲ್ಲಿದ್ದ ಭದ್ರತಾ ಸಿಬ್ಬಂದಿ ಸಕಾಲದಲ್ಲಿ ವಕೀಲರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.
ಪ್ರತ್ಯಕ್ಷದರ್ಶಿಗಳ ಹೇಳಿಕೆ : ವಕೀಲರು ಹೈಕೋರ್ಟ್ ಆವರಣದಲ್ಲಿ ಆತ್ಮಹತ್ಯೆಯಂತಹ ಹೆಜ್ಜೆ ಇಟ್ಟರು. ನಂತರ ಇಡೀ ಹೈಕೋರ್ಟ್ ಆವರಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು ಎಂದು ಕೋರ್ಟ್ನಲ್ಲಿನ ನೌಕರರು ಹಾಗೂ ಪ್ರಕರಣದ ವಿಚಾರಣೆಗೆ ಬಂದಿದ್ದ ವಕೀಲರು ತಿಳಿಸಿದ್ದಾರೆ. "ವಕೀಲ ಶಿವಪೂಜನ್ ಇಂತಹ ಆತ್ಮಹತ್ಯೆಯ ಹೆಜ್ಜೆ ಇಟ್ಟಿದ್ದಾರೆ. ಅವರು ಛಾವಣಿಯ ಮೇಲಿನ ರೇಲಿಂಗ್‌ನಿಂದ ಬಾಲ್ಕನಿಗೆ ಹಾರಿದರು. ಭದ್ರತಾ ಸಿಬ್ಬಂದಿ ಅವರನ್ನು ಸಕಾಲದಲ್ಲಿ ತಡೆದರು" ಎಂದು ಪ್ರತ್ಯಕ್ಷದರ್ಶಿ ಸಂಜಯ್ ಕುಮಾರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.