ಹೈದರಾಬಾದ್ (ತೆಲಂಗಾಣ): ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿದೆ. ಚಂಡಮಾರುತ ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಸಿದೆ. ಆದಿಲಾಬಾದ್ ಮತ್ತು ಮೇದಕ್ ಜಿಲ್ಲೆಗಳಲ್ಲಿ ಮೂವರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಮೇದಕ್ ಜಿಲ್ಲೆಯ ಪೆದ್ದ ಶಂಕರಂಪೇಟದಲ್ಲಿ ಸಿಡಿಲು ಬಡಿದು ಅಜ್ಜ-ಮೊಮ್ಮಗ ಸಾವನ್ನಪ್ಪಿರುವ ಘಟನೆಗೆ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸಂತಾಪ ಸೂಚಿಸಿದ್ದಾರೆ. ಸಿಡಿಲು ಬಡಿದು ಗಾಯಗೊಂಡ ನಾಲ್ವರಿಗೆ ವೈದ್ಯಕೀಯ ನೆರವು ನೀಡುವಂತೆ ಸಿಎಂ ರೇವಂತ್ ರೆಡ್ಡಿ ಅಧಿಕಾರಿಗಳಿಗೆ ಆದೇಶಿಸಿದರು.
ಸಂಯೋಜಿತ ಮೇದಕ್ ಜಿಲ್ಲೆಯಲ್ಲಿ ಚಂಡಮಾರುತ ಅವಾಂತರ ಸೃಷ್ಟಿಸಿದೆ. ಪೆದ್ದ ಶಂಕರಂಪೇಟ ಮಂಡಲದಲ್ಲಿ ಸಿಡಿಲು ಬಡಿದು ಅಜ್ಜ, ಮೊಮ್ಮಗ ಸಾವನ್ನಪ್ಪಿದ್ದಾರೆ. ಐಕೆಪಿ ಕೇಂದ್ರದಲ್ಲಿ ರಾಶಿ ರಾಶಿ ಧಾನ್ಯಗಳನ್ನು ಟಾರ್ಪಾಲಿನ್‌ನಿಂದ ಮುಚ್ಚಲು ಹೋದಾಗ ಅಜ್ಜ ಶ್ರೀರಾಮುಲು (50) ಮತ್ತು ವಿಶಾಲ್ (11) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅದಿಲಾಬಾದ್‌ನಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು: ಅದಿಲಾಬಾದ್ ಜಿಲ್ಲೆಯಲ್ಲಿ ಜೋರಾಗಿ ಬೀಸುತ್ತಿರುವ ಗಾಳಿಯಿಂದಾಗಿ ಹವಾಮಾನದಲ್ಲಿ ಭಾರಿ ಬದಲಾವಣೆಯಾಗಿದೆ. ಜೈನಾಥ್ ತಾಲೂಕಿನ ಗಿಮ್ಮ ಗ್ರಾಮದ ಉಪನಗರದಲ್ಲಿ ಸಿಡಿಲು ಬಡಿದು ಐವರು ಗಾಯಗೊಂಡಿದ್ದರು. ಈ ಪೈಕಿ ಗಿಮ್ಮನ ಗ್ರಾಮದ ಮಾಮಿಡಿಪಲ್ಲಿ ಕಿರಣ್ ಎಂಬುವರು ಮೃತಪಟ್ಟಿದ್ದಾರೆ. ಎಂಪಿಟಿಸಿ ಸದಸ್ಯ ಕೋಲ ಭೋಜಣ್ಣ, ಮಾಜಿ ಎಂಪಿಟಿಸಿ ಸದಸ್ಯ ರಮೇಶ್ ಹಾಗೂ ಉಪ ಸರಪಂಚ್ ಪತಿ ರಮೇಶ್ ಗಾಯಗೊಂಡಿದ್ದು, ಮತ್ತೋರ್ವ ಸಾಂಟೆಣ್ಣ ಎಂಬುವರ ಸ್ಥಿತಿ ಚಿಂತಾಜನಕವಾಗಿದೆ. ಎಲ್ಲಾ ಗಾಯಾಳುಗಳನ್ನು ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಬಿಆರ್ಎಸ್ ಜಿಲ್ಲಾಧ್ಯಕ್ಷ ಜೋಗು ರಾಮಣ್ಣ, ಆದಿಲಾಬಾದ್ ಶಾಸಕ ಪಾಯಲ್ ಶಂಕರ್ ಸಂತ್ರಸ್ತರನ್ನು ಭೇಟಿ ಮಾಡಿ ಆರೋಗ್ಯ ಸ್ಥಿತಿ ವಿಚಾರಿಸಿದರು.
ರಾಜ್ಯದಲ್ಲಿ ಐದು ದಿನಗಳು ಮಳೆ: ರಾಜ್ಯದಲ್ಲಿ ಐದು ದಿನಗಳ ಕಾಲ ಗುಡುಗು, ಮಿಂಚು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹೈದರಾಬಾದ್ ಹವಾಮಾನ ಕೇಂದ್ರ ತಿಳಿಸಿದೆ. ಇಂದು ಕರೀಂನಗರ, ವಾರಂಗಲ್, ಖಮ್ಮಂ, ರಂಗಾರೆಡ್ಡಿ ಸೇರಿದಂತೆ ಇನ್ನು ಕೆಲ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆದಿಲಾಬಾದ್, ನಿಜಾಮಾಬಾದ್, ಖಮ್ಮಂ, ರಂಗಾ ರೆಡ್ಡಿ ಮತ್ತು ಹೈದರಾಬಾದ್ ಸಂಯೋಜಿತ ಜಿಲ್ಲೆಗಳಲ್ಲಿ ನಾಳೆ ಗಂಟೆಗೆ 30 ರಿಂದ 40 ಕಿಲೋಮೀಟರ್ ವೇಗದ ಗಾಳಿಯೊಂದಿಗೆ ಸಾಧಾರಣ ಮಳೆ ಆಗಲಿದೆ ಎಂದು ಘೋಷಿಸಲಾಗಿದೆ.