ಹತ್ರಾಸ್ (ಉತ್ತರ ಪ್ರದೇಶ) :ಹತ್ರಾಸ್ ಸತ್ಸಂಗದಲ್ಲಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟವರನ್ನು ಕಂಡು ಇಟಾಹ್ ಜಿಲ್ಲೆಯ ಅವಘರ್ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ರವಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಇನ್ನೊಂದೆಡೆ ಆಸ್ಪತ್ರೆಯಲ್ಲಿ ಮೃತದೇಹಗಳನ್ನು ನೋಡಿದ ಬಾಲಕಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಹತ್ರಾಸ್ ಅಪಘಾತದಲ್ಲಿ ಈವರೆಗೆ ಸಾವನ್ನಪ್ಪಿದ 116 ಮಂದಿಯ ಪಟ್ಟಿಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ. ಜಿಲ್ಲಾಡಳಿತದ ಪ್ರಕಾರ, ಈ ಅಪಘಾತದಲ್ಲಿ ಇದುವರೆಗೆ ಒಟ್ಟು 121 ಜನರು ಸಾವನ್ನಪ್ಪಿದ್ದಾರೆ. ಗಾಯಾಳುಗಳಿಗೆ ಸಹಾಯ ಮಾಡಲು ಸಹಾಯವಾಣಿ ಸಂಖ್ಯೆಗಳನ್ನು ಸಹ ನೀಡಲಾಗಿದೆ.
ಜಿಲ್ಲೆಯ ಕೊತ್ವಾಲಿ ಸಿಕಂದರಾವ್ ಪೊಲೀಸ್ ಠಾಣೆ ವ್ಯಾಪ್ತಿಯ ರಾತಿಭಾನ್‌ಪುರದ ಫುಲ್ರೈ ಗ್ರಾಮದಲ್ಲಿ ಮಂಗಳವಾರ ನಾರಾಯಣ ಸಕರ್ ವಿಶ್ವ ಹರಿ ಸಂಸ್ಥೆಯಿಂದ ಸತ್ಸಂಗವನ್ನು ಆಯೋಜಿಸಲಾಗಿತ್ತು. ಇಲ್ಲಿ ಭೋಲೆ ಬಾಬಾರವರ ಸತ್ಸಂಗ ನಡೆಯುತ್ತಿತ್ತು. ಸತ್ಸಂಗ ಮುಗಿದ ಕೂಡಲೇ ಕಾಲ್ತುಳಿತ ಉಂಟಾಯಿತು. ಈ ಕಾಲ್ತುಳಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ತೀವ್ರವಾಗಿ ನಜ್ಜುಗುಜ್ಜಾಗಿದ್ದರು.
ತಡರಾತ್ರಿಯವರೆಗೂ ಈ ಕಾಲ್ತುಳಿತದಲ್ಲಿ 116 ಮಹಿಳೆಯರು ಮತ್ತು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ದೃಢಪಡಿಸಿದೆ. ಕಾಲ್ತುಳಿತದ ಸ್ಥಳದಲ್ಲಿ ಎಲ್ಲೆಂದರಲ್ಲಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂದಿವೆ. ಮೃತದೇಹಗಳನ್ನು ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ. ಅದೇ ಸಮಯದಲ್ಲಿ 116 ಸತ್ತವರ ಪಟ್ಟಿ ಮತ್ತು ಸಹಾಯವಾಣಿ ಸಂಖ್ಯೆಯನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.
ಹತ್ರಾಸ್ ಘಟನೆಗೆ ಸಂಬಂಧಿಸಿದಂತೆ ಅಲಿಗಢ ಜಿಲ್ಲಾ ಮ್ಯಾಜಿಸ್ಟ್ರೇಟ್ ವಿಶಾಖ್ ಜಿ ಅವರು ಮಾತನಾಡಿ, 23 ಮೃತದೇಹಗಳು ಅಲಿಗಢಕ್ಕೆ ಬಂದಿವೆ. ಗಾಯಗೊಂಡ ಮೂವರು ಜೆಎನ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಬ್ಬರ ಸ್ಥಿತಿ ಗಂಭೀರವಾಗಿದೆ. ಅವರನ್ನು ಐಸಿಯುಗೆ ಸೇರಿಸಿದ್ದಾರೆ. ಎಎಂಯು ಆಡಳಿತದ ಪರವಾಗಿ ರಿಜಿಸ್ಟ್ರಾರ್ ಮತ್ತು ಉಪಕುಲಪತಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. 15 ಮೃತದೇಹಗಳು ಜೆಎನ್ ವೈದ್ಯಕೀಯ ಕಾಲೇಜಿಗೆ, 6 ಮಲ್ಖಾನ್ ಸಿಂಗ್ ಜಿಲ್ಲಾ ಆಸ್ಪತ್ರೆಗೆ ಮತ್ತು ಎರಡು ಮರಣೋತ್ತರ ಕೇಂದ್ರಕ್ಕೆ ಬಂದಿವೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆಗಳು :
ಆಗ್ರಾ ವಲಯ ನಿಯಂತ್ರಣ-7839866849
ಅಲಿಗಢ್ ರೇಂಜ್ ಕಂಟ್ರೋಲ್-7839855724