ಹತ್ರಾಸ್(ಉತ್ತರ ಪ್ರದೇಶ):ಹತ್ರಾಸ್ ಜಿಲ್ಲೆಯಲ್ಲಿ ಮಂಗಳವಾರ ನಡೆದ ಸತ್ಸಂಗ ಕಾರ್ಯಕ್ರಮದಲ್ಲಿ ಕಾಲ್ತುಳಿತ ಉಂಟಾಗಿ 123 ಜನರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಮುಖ್ಯ ಸಂಘಟಕ ತಲೆಮರೆಸಿಕೊಂಡಿದ್ದು, ಸುಳಿವು ನೀಡಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ.
ಸ್ವಯಂಘೋಷಿತ ದೇವಮಾನವ ನಾರಾಯಣ ಸಕರ್ ಹರಿ ಅಲಿಯಾಸ್ ಭೋಲೆ ಬಾಬಾ ಹಮ್ಮಿಕೊಂಡಿದ್ದ ಸತ್ಸಂಗದಲ್ಲಿ ಭಾರೀ ಕಾಲ್ತುಳಿತ ಸಂಭವಿಸಿತ್ತು. ಇದುವರೆಗೆ 123 ಜನರು ಮೃತಪಟ್ಟಿರುವುದು ದೃಢಪಟ್ಟಿದೆ. ಸಾವಿಗೀಡಾದವರಲ್ಲಿ ಬಹುತೇಕರು ಮಹಿಳೆಯರೇ ಆಗಿದ್ದಾರೆ. ಈ ಭೀಕರ ದುರಂತಕ್ಕೆ ಸಂಘಟಕರ ನಿರ್ಲಕ್ಷ್ಯವೇ ಕಾರಣ ಎಂಬುವುದು ಬೆಳಕಿಗೆ ಬಂದಿದೆ. ಹೀಗಾಗಿ, ಸಂಘಟನಾ ಸಮಿತಿಯಲ್ಲಿದ್ದ ಹುಕುಂ ಸಿಂಗ್, ಮಂಜು ಯಾದವ್, ಮುಖೇಶ್ ಕುಮಾರ್, ಮಂಜು ದೇವಿ ಸೇರಿದಂತೆ 6 ಮಂದಿಯನ್ನು ಬಂಧಿಸಲಾಗಿದೆ ಎಂದು ಅಲಿಗಢ ಐಜಿ ಶಲಭ್ ಮಾಥುರ್ ಹೇಳಿದ್ದಾರೆ.
ಮುಖ್ಯ ಸಂಘಟಕ ವೇದಪ್ರಕಾಶ್ ಮಧುಕರ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಸತ್ಸಂಗ ವ್ಯವಸ್ಥೆಯ ಜವಾಬ್ದಾರಿ ವೇದಪ್ರಕಾಶ್ ಹಾಗೂ ಬಂಧಿತ ಆರು ಜನರ ಮೇಲಿತ್ತು. ಆದರೆ, ಜನಸಮೂಹ ನಿಯಂತ್ರಣ ತಪ್ಪಿ ಬಾಬಾನ ಪಾದಕ್ಕೆ ಪೂಜೆ ಸಲ್ಲಿಸಲು ಮುಂದಾಗಿತ್ತು. ಆದರೆ, ಇದಕ್ಕೆ ಸಂಘಟಕರು ಸಹಕರಿಸಿಲ್ಲ. ಆದ್ದರಿಂದ ಕಾಲ್ತುಳಿತ ದುರಂತ ಉಂಟಾಗಿದೆ. ಅಗತ್ಯಬಿದ್ದರೆ ಬಾಬಾ ಅವರ ವಿಚಾರಣೆಯನ್ನೂ ನಡೆಸಲಾಗುವುದು ಎಂದು ಐಜಿ ತಿಳಿಸಿದ್ದಾರೆ.