ಕೋಟಾ (ರಾಜಸ್ಥಾನ):ನಗರದ ಕುನ್ಹಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲ್ಯಾಂಡ್‌ಮಾರ್ಕ್ ಕೋಚಿಂಗ್ ಏರಿಯಾದಲ್ಲಿ ಮತ್ತೊಬ್ಬ ಕೋಚಿಂಗ್ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ವಿದ್ಯಾರ್ಥಿಯು ವೈದ್ಯಕೀಯ ಪ್ರವೇಶ ಪರೀಕ್ಷೆಯ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ (NEET UG 2024) ತಯಾರಿ ನಡೆಸಲು ಹರಿಯಾಣದ ರೋಹ್ಟಕ್‌ನಿಂದ ಕೋಟಾ ನಗರಕ್ಕೆ ಬಂದಿದ್ದನು.
ಹಾಸ್ಟೆಲ್ ಕೊಠಡಿಯಲ್ಲಿಯೇ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ವಿದ್ಯಾರ್ಥಿಯ ಮೃತದೇಹವನ್ನು ವಶಕ್ಕೆ ಪಡೆದು ಎಂಬಿಎಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಿದ್ದಾರೆ. ಭಾನುವಾರ ರಾತ್ರಿ 10.30ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ II ರಾಜೇಶ್ ಕುಮಾರ್ ಸೋನಿ ತಿಳಿಸಿದ್ದಾರೆ.
ಲ್ಯಾಂಡ್‌ಮಾರ್ಕ್ ಪ್ರದೇಶದ ಉತ್ತಮ್ ರೆಸಿಡೆನ್ಸಿಯಲ್ಲಿ ವಾಸಿಸುತ್ತಿರುವ ವಿಜಯಪಾಲ್ ಅವರ ಪುತ್ರ ಸುಮಿತ್ ಕುಮಾರ್ (19) ಎಂಬ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಳೆದ ಒಂದು ವರ್ಷದಿಂದ ಕೋಟಾದಲ್ಲಿ ನೆಲೆಸಿದ್ದರು. ಘಟನೆಯ ನಂತರ ಪೊಲೀಸರು ಆತನ ಹಾಸ್ಟೆಲ್ ಕೊಠಡಿಯನ್ನು ಸೀಲ್ ಮಾಡಿದ್ದಾರೆ. ಜೊತೆಗೆ ಕುಟುಂಬದ ಸದಸ್ಯರಿಗೂ ಸಂಪೂರ್ಣ ವಿಷಯವನ್ನು ತಿಳಿಸಲಾಗಿದೆ. ಕುಟುಂಬ ಸದಸ್ಯರ ಆಗಮನದ ನಂತರ, ಮರಣೋತ್ತರ ಪರೀಕ್ಷೆ ಮತ್ತು ಇತರ ಪ್ರಕ್ರಿಯೆಗಳು ಇಂದು (ಸೋಮವಾರ) ನಡೆಯಲಿವೆ. ಕೋಟಾ ನಗರದಲ್ಲಿ ಇದು ಈ ವರ್ಷದ ಆರನೇ ಆತ್ಮಹತ್ಯೆ ಪ್ರಕರಣವಾಗಿದೆ.