ಚಂಡೀಗಢ:ಹರಿಯಾಣ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿಯಾಗಿ ಗೆದ್ದು ದಾಖಲೆಯ ಮೂರನೇ ಬಾರಿಗೆ ಅಧಿಕಾರಕ್ಕೇರಲು ಸಜ್ಜಾಗಿದೆ. ಕಾಂಗ್ರೆಸ್ನಿಂದ ಭಾರಿ ಸವಾಲು ಎದುರಾಗಿದ್ದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಅಲ್ಪಮತಗಳಲ್ಲಿ ಗೆಲುವು ಕಂಡಿದ್ದಾರೆ.
ಹರಿಯಾಣದ ಉಚ್ಚಾನ್ ಕಲಾನ್ ಕ್ಷೇತ್ರವು ಅತಿ ತುರುಸಿನ ಸ್ಪರ್ಧೆಗೆ ಸಾಕ್ಷಿಯಾಗಿದೆ. ಇಲ್ಲಿನ ಬಿಜೆಪಿ ಅಭ್ಯರ್ಥಿ ದೇವೇಂದ್ರ ಚಟರ್ ಅವರು ಕಾಂಗ್ರೆಸ್‌ನ ಬ್ರಿಜೇಂದ್ರ ಸಿಂಗ್ ಅವರನ್ನು ಕೇವಲ 32 ಮತಗಳಿಂದ ಸೋಲಿಸಿದ್ದಾರೆ. ಇದು ರಾಜ್ಯದಲ್ಲಿಯೇ ಅತಿ ಕಡಿಮೆ ಅಂತರದ ಜಯ. ವಿಶೇಷವೆಂದರೆ, ಇದೇ ಕ್ಷೇತ್ರದ ಹಾಲಿ ಶಾಸಕ ಮತ್ತು ಜೆಜೆಪಿ ನಾಯಕ ದುಶ್ಯಂತ್ ಚೌಟಾಲಾ ಕಳಪೆ ಪ್ರದರ್ಶನ ನೀಡಿದ್ದಾರೆ. ಇವರು ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಇಂಡಿಯನ್ ನ್ಯಾಷನಲ್ ಲೋಕ ದಳದ ಆದಿತ್ಯ ದೇವಿಲಾಲ್ ಅವರು ದಬ್ವಾಲಿ ಕ್ಷೇತ್ರದಲ್ಲಿ 610 ಮತಗಳಿಂದ ಗೆದ್ದರು. ಕಾಂಗ್ರೆಸ್‌ನ ಅಮಿತ್ ಸಿಹಾಗ್ ಅವರು ಇಲ್ಲಿ ಸೋತರು. ಲೋಹರು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಅಭ್ಯರ್ಥಿ ರಾಜಬೀರ್ ಫರ್ತಿಯಾ ಅವರು ಬಿಜೆಪಿಯ ಹಿರಿಯ ನಾಯಕ ಜೈ ಪ್ರಕಾಶ್ ದಲಾಲ್ ಅವರನ್ನು ಕೇವಲ 792 ಮತಗಳಿಂದ ಸೋಲಿಸಿದರು.
ಆದಂಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದರ್ ಪ್ರಕಾಶ್ ಅವರು ಬಿಜೆಪಿಯ ಭವ್ಯಾ ಬಿಷ್ಣೋಯ್ ಅವರನ್ನು 1,268 ಮತಗಳ ಅಂತರದಿಂದ ಮಣಿಸಿದರು. ದಾದ್ರಿ ಕ್ಷೇತ್ರದಲ್ಲಿ ಬಿಜೆಪಿಯ ಸುನೀಲ್ ಸತ್ಪಾಲ್ ಸಾಂಗ್ವಾನ್ ಅವರು ಕಾಂಗ್ರೆಸ್‌ನ ಮನೀಶಾ ಸಾಂಗ್ವಾನ್ ಅವರನ್ನು 1,957 ಮತಗಳ ಅಂತರದಿಂದ ಜಯಿಸಿದರು.