ಅಂಬಾಲಾ (ಹರಿಯಾಣ):ಮಿನಿ ಬಸ್ ಮತ್ತು ಟ್ರಕ್ ನಡುವೆ ಭೀಕರ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ 7 ಮಂದಿ ಸಾವನ್ನಪ್ಪಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಅಂಬಾಲಾದಲ್ಲಿ ನಡೆದಿದೆ. ಮೃತರೆಲ್ಲರೂ ಉತ್ತರ ಪ್ರದೇಶದ ಬುಲಂದ್‌ಶಹರ್ ಮೂಲದವರು. ಮಿನಿ ಬಸ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ವೈಷ್ಣೋದೇವಿಗೆ ಹೋಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಿಂದ ಸುಮಾರು 30 ಜನರು ಮಿನಿ ಬಸ್‌ನಲ್ಲಿ ವೈಷ್ಣೋದೇವಿಗೆ ತೆರಳುತ್ತಿದ್ದರು. ಆದರೆ, ಹರಿಯಾಣದ ಅಂಬಾಲಾದ ದೆಹಲಿ - ಅಮೃತಸರ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಮಿನಿ ಬಸ್ ಮತ್ತು ಟ್ರಕ್ ನಡುವೆ ಅಪಘಾತ ಉಂಟಾಗಿದೆ. ಮಿನಿ ಬಸ್ಸಿನ ಮುಂದೆ ಚಲಿಸುತ್ತ ಟ್ರಕ್ ಇದ್ದಕ್ಕಿದ್ದಂತೆ ಬ್ರೇಕ್ ಹಾಕಿದೆ. ಇದರಿಂದ ಬಸ್ ಹಿಂದಿನಿಂದ ಟ್ರಕ್ಗೆ ಡಿಕ್ಕಿ ಹೊಡೆದಿದೆ. ಈ ಡಿಕ್ಕಿಯ ರಭಸಕ್ಕೆ ಬಸ್ ಸಂಪೂರ್ಣ ನಜ್ಜು-ಗುಜ್ಜಾಗಿದೆ.
ಈ ಭೀಕರ ಅಪಘಾತದಿಂದ ಪ್ರಯಾಣಿಕರ ಕಿರುಚಾಟ ಕೇಳಿದ ದಾರಿಹೋಕರು ಗಾಯಾಳುಗಳನ್ನು ಬಸ್‌ನಿಂದ ಹೊರತೆಗೆದಿದ್ದಾರೆ. ನಂತರ ವಿಷಯ ತಿಳಿದು ಪೊಲೀಸರ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಷ್ಟರಲ್ಲೇ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇತರ ನಾಲ್ವರು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತ ಏಳು ಜನರಲ್ಲಿ ಆರು ತಿಂಗಳ ಮಗು ಕೂಡ ಸೇರಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.