ಶ್ರೀನಗರ, ಜಮ್ಮು ಮತ್ತು ಕಾಶ್ಮೀರ:ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಶಾಂಗಸ್ ಲಾರ್ನೂ ಕಚ್ವಾನ್ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಮತ್ತೊಂದು ಎನ್‌ಕೌಂಟರ್‌ನಲ್ಲಿ ಇಬ್ಬರು ಅಪರಿಚಿತ ಉಗ್ರರು ಹತರಾಗಿದ್ದಾರೆ. ಈ ಬಗ್ಗೆ ಭದ್ರತಾ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ಖಚಿತಪಡಿಸಿದ್ದು, ಕಾರ್ಯಾಚರಣೆ ಮುಂದುವರೆದಿದೆ.
ಇನ್ನು ಶ್ರೀನಗರದ ಖನ್ಯಾರ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆಯುತ್ತಿರುವ ಎನ್‌ಕೌಂಟರ್‌ನಲ್ಲಿ ಓರ್ವ ಸಿಆರ್‌ಪಿಎಫ್ ಗಾಯಗೊಂಡಿದ್ದಾರೆ.
ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಪನಾರ್ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಭಯೋತ್ಪಾದಕರನ್ನು ಹೊಡೆದು ಹಾಕಲು ಭದ್ರತಾಪಡೆ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಈ ಬಗ್ಗೆ ಎಕ್ಸ್ ಪೋಸ್ಟ್ನಲ್ಲಿ ಭಾರತೀಯ ಸೇನೆಯ ಚಿನಾರ್ ಕಾರ್ಪಸ್ ಪೋಸ್ಟ್ ಮಾಡಿದೆ. '1 ನವೆಂಬರ್ 2024 ರಂದು ತಡರಾತ್ರಿ, ಬಂಡಿಪೋರಾದ ಜನ್ ಪ್ರದೇಶದಲ್ಲಿ ಪನಾರ್‌ನಲ್ಲಿ ಅನುಮಾನಾಸ್ಪದ ಚಲನೆಯನ್ನು ಗುರುತಿಸಲಾಗಿದೆ. ಭಯೋತ್ಪಾದಕರಿಗೆ ಸವಾಲೆಸೆದ ಕೂಡಲೇ ಮನಬಂದಂತೆ ಗುಂಡಿನ ದಾಳಿ ನಡೆಸಿ ಕಾಡಿಗೆ ಪರಾರಿಯಾಗಿದ್ದಾರೆ. ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಈ ಮಧ್ಯೆ ಹಲವಾರು ಪ್ರದೇಶಗಳನ್ನು ಸುತ್ತುವರೆಯಲಾಗಿದೆ. ಮತ್ತು ಅಡಗಿರುವ ಭಯೋತ್ಪಾದಕರ ಪತ್ತೆಗಾಗಿ ಶೋಧ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.