ನವದೆಹಲಿ: ಫೆಬ್ರವರಿ ತಿಂಗಳಲ್ಲಿ 1.68 ಲಕ್ಷ ಕೋಟಿ ರೂಪಾಯಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವಾಗಿದೆ. ಇದು ಇಲ್ಲಿಯವರೆಗೆ ದಾಖಲಾದ ನಾಲ್ಕನೇ ಅತಿ ಹೆಚ್ಚಿನ ಮಾಸಿಗ ಜಿಎಸ್‌ಟಿ ಆಗಿದೆ. ಕಳೆದ ವರ್ಷ ಇದೇ ತಿಂಗಳಿಗೆ ಹೋಲಿಸಿದರೆ, ಈ ಬಾರಿ ಶೇ.12.5ರಷ್ಟು ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ಅದಲ್ಲದೇ, ಪ್ರಸ್ತುತ ಆರ್ಥಿಕ ವರ್ಷದ ಏಪ್ರಿಲ್ ತಿಂಗಳಿಂದ ಫೆಬ್ರವರಿಯವರೆಗೆ ಒಟ್ಟಾರೆ 18.40 ಲಕ್ಷ ಕೋಟಿ ಜಿಎಸ್‌ಟಿ ಆದಾಯ ಬಂದಿದೆ. ಇದರೊಂದಿಗೆ ವಾರ್ಷಿಕವಾಗಿಯೂ ಶೇ.11.7ರಷ್ಟು ಅಧಿಕವಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.
''2024ರ ಫೆಬ್ರವರಿಯಲ್ಲಿ ಒಟ್ಟು ಜಿಎಸ್‌ಟಿ ಆದಾಯವು 1,68,337 ಕೋಟಿ ರೂ.ಗಳಾಗಿದ್ದು, 2023ರ ಅದೇ ತಿಂಗಳಿಗೆ ಹೋಲಿಕೆ ಮಾಡಿದರೆ, ಶೇ.12.5ರಷ್ಟು ಹೆಚ್ಚಾಗಿದೆ. ದೇಶೀಯ ವಹಿವಾಟಿನ ಜಿಎಸ್‌ಟಿಯಲ್ಲಿ ಶೇ.13.9ರಷ್ಟು ಮತ್ತು ಸರಕುಗಳ ಆಮದುಗಳ ಜಿಎಸ್‌ಟಿಯಲ್ಲಿ ಶೇ.8.5ರಷ್ಟು ಹೆಚ್ಚಿನ ಸಂಗ್ರಹದಿಂದ ಈ ಬೆಳವಣಿಗೆ ಸಾಧಿಸಲಾಗಿದೆ'' ಎಂದು ವಿತ್ತ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಸರಾಸರಿ ಮಾಸಿಕ ಜಿಎಸ್‌ಟಿ ಸಂಗ್ರಹವು 1.67 ಲಕ್ಷ ಕೋಟಿ ರೂ.ಗಳಷ್ಟಿದ್ದು, ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ 1.5 ಲಕ್ಷ ಕೋಟಿಗಿಂತ ಅಧಿಕವಾಗಿದೆ. ಈ ವರ್ಷದ ಫೆಬ್ರವರಿ ತಿಂಗಳ ಮರುಪಾವತಿಯ ನಿವ್ವಳ ಜಿಎಸ್‌ಟಿ ಆದಾಯವು 1.51 ಲಕ್ಷ ಕೋಟಿ ರೂ.ಗಳಾಗಿದ್ದು, ಇದರಲ್ಲೂ ಸಹ ಶೇ.13.6ರಷ್ಟು ಬೆಳವಣಿಗೆಯಾಗಿದೆ.