ಕರ್ನಾಟಕ

karnataka

ETV Bharat / bharat

ಕೇವಲ 20 ರೂಪಾಯಿಯಲ್ಲಿ ಮದುವೆ; ಅಚ್ಚರಿ ಅನ್ನಿಸಿದರೂ ಸತ್ಯ! - UNIQUE MARRIAGE IN GORYA TRIBE

ವರನ ಜೇಬಿನಲ್ಲಿ 20 ರೂಪಾಯಿ ಇದ್ದರೆ ಇಲ್ಲಿ ಆರಾಮವಾಗಿ ಮದುವೆ ನಡೆಯುತ್ತದೆ. ಇನ್ನು ವಧು ಕಡೆಯವರು ಮದುವೆಗೆ ಹಣ ಕೂಡಿಡುವ ಅಗತ್ಯವೂ ಇಲ್ಲಿಲ್ಲ.

Unique marriage in Gorya tribe of Dhamtari Vivah is confirmed for twenty rupees only
ಕೇವಲ 20 ರೂಪಾಯಿಯಲ್ಲಿ ಮದುವೆ (ಸಂಗ್ರಹ ಚಿತ್ರ)

By ETV Bharat Karnataka Team

Published : 5 hours ago

ಧಮತರಿ (ಛತ್ತೀಸ್‌ಗಢ): ''ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು'' ಎಂಬುದು ಪ್ರಸಿದ್ಧ ಗಾದೆ. ಆದರೆ, ಈಗ ಭಾರತೀಯರಿಗೆ ಮದುವೆ ಆಗುವುದು ಮತ್ತು ಮನೆ ಕಟ್ಟುವುದು ಎರಡೂ ಪ್ರತಿಷ್ಠೆಯ ವಿಷಯವಾಗಿದೆ. ಈ ಗಾದೆ ಮಾತಿನ ತದ್ವಿರುದ್ಧವಾಗಿ ಇಲ್ಲಿ ಕೇವಲ 20 ರೂ. ಯಲ್ಲಿ ಮದುವೆ ಮಾಡಿ ಕೊಡುವ ಸಂಪ್ರದಾಯವಿದೆ. ಅಚ್ಚರಿ ಎನಿಸಿದರೂ ಇದು ಸತ್ಯ.

ಹೌದು, ಛತ್ತೀಸ್‌ಗಢದ ಧಮತರಿಯ ಭಟ್‌ಗಾಂವ್‌ ಎಂಬಲ್ಲಿ ವಾಸಿಸುವ ಗೋರಿಯಾ ಬುಡಕಟ್ಟು ಸಮುದಾಯ ಇಂದಿಗೂ ಈ ಸರಳ ಮದುವೆ ಪದ್ಧತಿಯನ್ನು ಮುಂದುವರಿಸಿಕೊಂಡು ಹೋಗುತ್ತಿದೆ.

ಮದುವೆಯ ವಿಶಿಷ್ಟ ಸಂಪ್ರದಾಯ:ಶತಮಾನಗಳಿಂದ ವಿಶಿಷ್ಟ ಸಂಪ್ರದಾಯವನ್ನು ನಡೆಸಿಕೊಂಡು ಬರುತ್ತಿರುವ ಗೋರಿಯಾ ಬುಡಕಟ್ಟು ಹತ್ತು ಹಲವು ಮಾದರಿಗೆ ಸಾಕ್ಷಿಯಾಗಿದ್ದು, ಅದರಲ್ಲಿ ಮದುವೆ ಕೂಡ ಒಂದು. ಇದೊಂದು ಹಳೆಯ ಪದ್ಧತಿಯಾಗಿದ್ದು, ಇಂದಿಗೂ ಮುಂದುವರಿಸಿಕೊಂಡು ಬರಲಾಗುತ್ತಿದೆ.

ಗೋರಿಯಾ ಬುಡಕಟ್ಟಿನಲ್ಲಿ ಹುಡುಗ ಅಥವಾ ಹುಡುಗಿ ಮದುವೆಯಾಗಬೇಕಾದರೆ, ಎರಡೂ ಕಡೆಯವರು ಕೇವಲ 20 ರಿಂದ 500 ರೂಪಾಯಿಗಳನ್ನು ವರದಕ್ಷಿಣೆ ಅಥವಾ ವಧುದಕ್ಷಿಣೆ ರೂಪದಲ್ಲಿ ಕೊಟ್ಟು ತಮ್ಮ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳುತ್ತಾರೆ. ವಧು ಮದುವೆಗೆ ಸಿದ್ಧರಾಗಿದ್ದರೆ ವರ ಈ ಸಣ್ಣ ಮೊತ್ತವನ್ನು ವರದಕ್ಷಿಣೆ ರೂಪದಲ್ಲಿ ಪಾವತಿಸಿ ವಧುವನ್ನು ಮನೆಗೆ ಕರೆದುಕೊಂಡು ಹೋಗುವುದು ಇಲ್ಲಿನ ಸಂಪ್ರದಾಯ. ಇದೇ ಗೋರಿಯಾ ಬುಡಕಟ್ಟು ಸಮುದಾಯದ ಸರಳ ಮದುವೆ ಆಗಿರುತ್ತದೆ.

"ನನ್ನ ತಾಯಿಯ ಮನೆ ಕನರಿ. ನನ್ನ ಮದುವೆಯ ಸಮಯದಲ್ಲಿ 60 ರೂಪಾಯಿಗೆ ನಮ್ಮ ಸಂಬಂಧವನ್ನು ಗಟ್ಟಿ ಮಾಡಿಕೊಳ್ಳಲಾಯಿತು. ಅದನ್ನು ನಾವು ನಮ್ಮ ಭಾಷೆಯಲ್ಲಿ ಸುಖ-ಬಂಧನ ಎಂದು ಕರೆಯುತ್ತೇವೆ. ನಮ್ಮ ಮದುವೆ ಮೂರು ದಿನಗಳ ಕಾಲ ನಡೆಯಿತು" ಎಂದು ಬಾಯಿ ಎಂಬ ಮಹಿಳೆ ತನ್ನ ಮದುವೆ ಪ್ರಸಂಗ ಹೇಳಿಕೊಂಡಿದ್ದಾರೆ.

"ನಮ್ಮ ಕಾಲದಲ್ಲಿ ಮದುವೆಗಳು ಹೀಗೆಯೇ ನಡೆಯುತ್ತಿದ್ದವು. ಈಗ ಕಾಲ ಸ್ವಲ್ಪ ಬದಲಾಗಿದೆ. ಕೆಲವರು ಹಳೆಯ ಸಂಪ್ರದಾಯವನ್ನು ಅನುಸರಿಸುತ್ತಾರೆ, ಕೆಲವರು ಅನುಸರಿಸುವುದಿಲ್ಲ" ಎಂದು ಮತ್ತೋರ್ವ ಮಹಿಳೆ ದಿನಬತಿಬಾಯಿ ಹೇಳಿದ್ದಾರೆ.

20 ರೂಪಾಯಿಗೆ ಮದುವೆ ನಿಶ್ಚಯ: ಹಲವು ವರ್ಷಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯವನ್ನು ಗೋರಿಯಾ ಬುಡಕಟ್ಟು ಜನರು ಇಂದಿಗೂ ಅನುಸರಿಸುತ್ತಿದ್ದಾರೆ. ಮದುವೆ ನಿಶ್ಚಯಿಸುವಾಗ ಹುಡುಗಿಯ ಕಡೆಯವರಿಗೆ ನೀಡಿದ ಹಣವನ್ನು ಅವರ ಕುಟುಂಬ ಠೇವಣಿಯಂತೆ ಇಟ್ಟುಕೊಂಡಿರುತ್ತದೆ. ಒಂದು ವೇಳೆ ಮದುವೆ ಮುರಿದು ಬಿದ್ದರೆ ಮದುವೆ ವೇಳೆ ಕೊಟ್ಟ ಹಣವನ್ನು ವಾಪಸ್ ಕೊಡುತ್ತಾರೆ. ಬಳಿಕ ಅವರ ಮಗಳನ್ನು ಪತಿ ಮನೆಯಿಂದ ಕರೆದುಕೊಂಡು ಹೋಗುತ್ತಾರೆ. ಇದು ಗೋರಿಯಾ ಬುಡಕಟ್ಟು ಜನರ ಪದ್ಧತಿ ಎನ್ನುತ್ತಾರೆ ಜಗಮೋಹಿನಿ ಬಾಯಿ.

ವಿಶಿಷ್ಟ ಆಚರಣೆ:ಅಷ್ಟೇ ಅಲ್ಲ, ಗೋರಿಯಾ ಬುಡಕಟ್ಟು ಸಮುದಾಯದಲ್ಲಿ ಮದುವೆಗೂ ಮುನ್ನ ಹುಡುಗ-ಹುಡುಗಿಯನ್ನು ಒಂದೇ ಕೊಠಡಿಯಲ್ಲಿ ಬೀಗ ಹಾಕುವ ಸಂಪ್ರದಾಯವೂ ಇದೆ. ಮದುವೆ ನಿಶ್ಚಯವಾದ ಬಳಿಕ ಯುವಕ, ಯುವತಿ ಪರಸ್ಪರ ಅರ್ಥ ಮಾಡಿಕೊಳ್ಳಲು, ಇಬ್ಬರನ್ನೂ ಕೆಲವು ದಿನ ಒಂದೇ ಕೋಣೆಯಲ್ಲಿ ಲಾಕ್ ಮಾಡಲಾಗುತ್ತದೆ. ನಂತರ ಇಬ್ಬರೂ ಒಪ್ಪಿದರೆ ಮದುವೆ ಮಾಡಲಾಗುತ್ತದೆ ಎಂದು ಗೋರಿಯಾ ಜನರು ಹೇಳುತ್ತಾರೆ.

"ಎರಡೂ ಕುಟುಂಬಸ್ಥರು ಒಪ್ಪಿದರೆ ಮಾತ್ರ ಮದುವೆ. ಇಲ್ಲದಿದ್ದರೆ ವರನ ಕಡೆಯವರು ನೀಡಿರುವ ಹಣವನ್ನು ವಧುವಿನ ಕುಟುಂಬಸ್ಥರು ವಾಪಸ್ ನೀಡುತ್ತಾರೆ. ಇನ್ನು, ಒಪ್ಪಿದರೆ ಅಲ್ಲಿನ ಶಿಬಿರದಲ್ಲೇ ಮದುವೆ ಮಾಡಲಾಗುತ್ತದೆ. ಈ ಹಿಂದೆ ಕೇವಲ 20 ರೂಪಾಯಿಯಲ್ಲಿ ವಿವಾಹ ಆಗುತ್ತಿತ್ತು. ಈಗ ಇದು 500 ರೂ.ವರೆಗೆ ತಲುಪಿದೆ" ಎಂದು ಮುಖ್ಯಶಿಕ್ಷಕ ದಿನೇಶ್ ಕುಮಾರ್ ಪಾಂಡೆ ಹೇಳಿದರು.

ಆನ್‌ಲೈನ್ ಯುಗದಲ್ಲಿಯೂ ಗೋರಿಯಾ ಬುಡಕಟ್ಟು ಸಮುದಾಯದ ಇಂದಿನ ಪೀಳಿಗೆ ಇದೇ ಸಂಪ್ರದಾಯವನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ವಿಶೇಷ.

ಇದನ್ನೂ ಓದಿ: ಪತಿ ಜೊತೆಗಿದ್ದುಕೊಂಡೇ 2ನೇ ಮದುವೆಗೆ ವರನ ಹುಡುಕಾಡಿದ ಪತ್ನಿ: ವಿಚ್ಛೇದನಕ್ಕೆ ಹೈಕೋರ್ಟ್ ಅಸ್ತು

ಇದನ್ನೂ ಓದಿ:ಸೋಷಿಯಲ್ ಮೀಡಿಯಾದಲ್ಲಿ ಫಿಕ್ಸ್ ಆದ ಕನ್ಯೆಯೇ ಫೇಕ್; ಮದುವೆ ಮಂಟಪದಲ್ಲಿ ವಧು ಇಲ್ಲದೇ ವರ ವಾಪಸ್!

ABOUT THE AUTHOR

...view details