ಕಲಿಯುಗದ ಪ್ರತ್ಯಕ್ಷ ದೈವರೆಂದು ಶ್ರೀವೆಂಕಟೇಶ್ವರನನ್ನು ಪರಿಗಣಿಸಲಾಗಿದೆ. ಶ್ರೀನಿವಾಸನ ದರ್ಶನ ಪಡೆಯಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ನಿರಂತರವಾಗಿ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲಕ್ಕೆ ಭೇಟಿ ನೀಡುತ್ತಾರೆ. ಪ್ರತಿನಿತ್ಯ ಸಾವಿರಾರು ಭಕ್ತರು ಕಾಲ್ನಡಿಗೆಯಲ್ಲಿ ಸಪ್ತಗಿರಿಗಳನ್ನು ಹತ್ತಿ ತಮ್ಮ ಪ್ರಾರ್ಥನೆ ಹಾಗೂ ಹರಕೆ ತೀರಿಸುತ್ತಾರೆ. ಸಪ್ತಗಿರಿ ವಾಸನಿಗೆ ಸಾವಿರಾರು ಜನರು ತಮ್ಮ ಮುಡಿಯನ್ನೂ ಅರ್ಪಿಸುತ್ತಾರೆ. ಚಿನ್ನ, ಹಣ ಸೇರಿ ಅನೇಕ ಬೆಲೆಬಾಳುವ ವಸ್ತುಗಳನ್ನು ಹುಂಡಿಯಲ್ಲಿ ಹಾಕಿ ಹರಕೆ ತೀರಿಸುತ್ತಾರೆ.
ಆದರೆ, ನೀವು ತಿರುಮಲ ತಿರುಪತಿಗೆ ಭೇಟಿ ನೀಡಲು ಇಚ್ಛಿಸಿದರೆ, ದೇವಸ್ಥಾನ ಟಿಕೆಟ್‌ಗಳನ್ನು ಮಾತ್ರವಲ್ಲದೆ ರೈಲು ಮತ್ತು ಕೊಠಡಿಯನ್ನು ಪ್ರತ್ಯೇಕವಾಗಿ ಕಾಯ್ದಿರಿಸುವುದು ಸ್ವಲ್ಪ ಕಷ್ಟಕರ. ತಿರುಮಲಕ್ಕೆ ಹೋಗಬೇಕಾದರೆ ಒಂದು ತಿಂಗಳು ಮೊದಲೇ ಪ್ಲಾನ್ ಮಾಡಬೇಕು. ಇದ್ಯಾವುದರ ಕಷ್ಟವಿಲ್ಲದೇ ಶ್ರೀವೆಂಕಟೇಶ್ವರ ಸ್ವಾಮಿಯ ನೇರ ದರ್ಶನವಾದರೆ ಹೇಗೆ?. ಹೌದು, ಇದು ನಿಜವಾಗಲಿದೆ. ಆದರೆ, ತಿರುಮಲದ ಸ್ಥಳೀಯರಿಗೆ ಮಾತ್ರ ಇಂತಹ ಅವಕಾಶ ಸಿಗಲಿದೆ.
ಪ್ರತಿ ಮಂಗಳವಾರ ದರ್ಶನ:ತಿರುಮಲ ತಿರುಪತಿ ದೇವಸ್ಥಾನದ ಆಡಳಿತ ಮಂಡಳಿ ರಚನೆಯಾದ ಬಳಿಕ ತಿರುಮಲದ ಸ್ಥಳೀಯರು ಪ್ರತಿ ಮಂಗಳವಾರ ಶ್ರೀಗಳ ದರ್ಶನದ ಅವಕಾಶ ಪಡೆಯಲಿದ್ದಾರೆ ಎಂದು ತಿರುಪತಿ ಕ್ಷೇತ್ರದ ಜನಸೇನಾ ಶಾಸಕ ಅರಣಿ ಶ್ರೀನಿವಾಸುಲು ತಿಳಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಗಮನಕ್ಕೆ ತರಲಾಗಿದೆ. ಶೀಘ್ರದಲ್ಲೇ ಇದರ ಕುರಿತು ನಿರ್ಧಾರ ಪ್ರಕಟಿಸಲಾಗುವುದು. ಈ ನಿಟ್ಟಿನಲ್ಲಿ ಮಾರ್ಗಸೂಚಿಗಳನ್ನೂ ಬಹಿರಂಗಪಡಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಇದೇ ವೇಳೆ, ಭ್ರಷ್ಟಾಚಾರದ ವಿರುದ್ಧ ವಿಜಿಲೆನ್ಸ್ ಅಧಿಕಾರಿಗಳು ಕಾನೂನು ಕ್ರಮ ಕೈಗೊಳ್ಳುತ್ತಾರೆ. ತಿರುಮಲದ ಸಣ್ಣ ಅಂಗಡಿಗಳ ಮಾಲೀಕರ ಸಮಸ್ಯೆಗಳ ಕುರಿತು ಟಿಟಿಡಿ ಅಧಿಕಾರಿಗಳ ಜತೆ ಚರ್ಚಿಸುವುದಾಗಿ ಶಾಸಕ ಶ್ರೀನಿವಾಸುಲು ಹೇಳಿದ್ದಾರೆ.