ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ ಸಿಎಂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಕಳ್ಳರ ಹಾವಳಿ; ಚಿನ್ನ, ಮೊಬೈಲ್​​, ಹಣ ಮಾಯ - MAHAYUTI GOVERNMENT

ಮಹಾರಾಷ್ಟ್ರ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕಳ್ಳತನವಾಗಿದೆ. ಕಾರ್ಯಕ್ರಮಕ್ಕೆ ಬಂದಿದ್ದ ಜನರನ್ನು ಕಳ್ಳರು ದೋಚಿದ್ದಾರೆ.

ಮಹಾರಾಷ್ಟ್ರ ಸಿಎಂ ಪ್ರಮಾಣ ಸ್ವೀಕಾರ ವೇಳೆ ಕಳ್ಳರ ಕೈಚಳಕ
ಮಹಾರಾಷ್ಟ್ರ ನೂತನ ಸಿಎಂ ಪ್ರಮಾಣವಚನ ಕಾರ್ಯಕ್ರಮ (PTI)

By PTI

Published : Dec 8, 2024, 4:51 PM IST

ಮುಂಬೈ(ಮಹಾರಾಷ್ಟ್ರ):ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಕಳ್ಳರು ಕೈಚಳಕ ತೋರಿಸಿದ್ದಾರೆ. ಚಿನ್ನದ ಸರಗಳು, ಮೊಬೈಲ್ ಫೋನ್​ಗಳು ಮತ್ತು ವ್ಯಾಲೆಟ್​ಗಳನ್ನು ಎಗರಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದಕ್ಷಿಣ ಮುಂಬೈನ ಆಜಾದ್ ಮೈದಾನದಲ್ಲಿ ಡಿಸೆಂಬರ್ 5ರಂದು ನಡೆದ 'ಮಹಾಯುತಿ' ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಿದ್ದ ಜನರ ಚಿನ್ನ, ಮೊಬೈಲ್ ಮತ್ತು 12 ಲಕ್ಷ ರೂಪಾಯಿ ಮೌಲ್ಯದ ನಗದು ಕಳ್ಳತನವಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.

ಕಳ್ಳರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ. ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ಆಜಾದ್ ಮೈದಾನ್ ಪೊಲೀಸ್ ಠಾಣೆಯ ಅಧಿಕಾರಿ ಮಾಹಿತಿ ನೀಡಿದರು.

ಮೈದಾನದ ಗೇಟ್​​ ನಂಬರ್​ 2ರಲ್ಲಿ ಕಳ್ಳತನ ನಡೆದಿವೆ. ಸಿಸಿಟಿವಿ ದ್ಯಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಚಿನ್ನ, ಮೊಬೈಲ್​, ವಾಲೆಟ್​ ಕಳೆದುಕೊಂಡವರು ದೂರು ನೀಡಿದ್ದಾರೆ. ಆರೋಪಿಗಳನ್ನು ಹಿಡಿದು ವಸ್ತುಗಳನ್ನು ಮಾಲೀಕರಿಗೆ ಮರಳಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

3ನೇ ಬಾರಿಗೆ ಫಡ್ನವಿಸ್​ ಸಿಎಂ:ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದರು. ಶಿವಸೇನೆಯ ಏಕನಾಥ್ ಶಿಂಧೆ ಮತ್ತು ಎನ್‌ಸಿಪಿ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ಬೋಧನೆ ಪಡೆದರು. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಉದ್ಯಮಿಗಳು, ಚಿತ್ರನಟ, ನಟಿಯರು ಮತ್ತು ರಾಜಕೀಯ ಗಣ್ಯರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಭದ್ರತೆಗಾಗಿ 4 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ಮೈದಾನದ ಸುತ್ತಲೂ ಸಿಸಿಟಿವಿ ನಿಗಾ ಇಡಲಾಗಿತ್ತು. ಆದಾಗ್ಯೂ ಕಳ್ಳರು ಕರಾಮತ್ತು ತೋರಿಸಿದ್ದಾರೆ.

ನವೆಂಬರ್ 20ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಶಿವಸೇನೆ (ಶಿಂಧೆ ಬಣ) ಮತ್ತು ಎನ್​​ಸಿಪಿ (ಅಜಿತ್ ಬಣ) ನೇತೃತ್ವದ 'ಮಹಾಯುತಿ' ಮೈತ್ರಿಯು ಮಹಾರಾಷ್ಟ್ರ ವಿಧಾನಸಭೆಯ 288 ಸ್ಥಾನಗಳ ಪೈಕಿ 230ರಲ್ಲಿ ಭರ್ಜರಿ ಜಯ ದಾಖಲಿಸಿದೆ. ಬಿಜೆಪಿ 132, ಶಿವಸೇನೆ 57 ಮತ್ತು ಎನ್‌ಸಿಪಿ 41 ಸ್ಥಾನಗಳನ್ನು ಗೆದ್ದಿವೆ. ಇತ್ತ, ಪ್ರತಿಪಕ್ಷಗಳಾದ ಶಿವಸೇನೆ (ಯುಬಿಟಿ) 20, ಕಾಂಗ್ರೆಸ್ 16 ಮತ್ತು ಎನ್‌ಸಿಪಿ (ಎಸ್‌ಪಿ) 10 ಸೇರಿ ಕೇವಲ 46 ಸ್ಥಾನ ಪಡೆದುಕೊಂಡಿವೆ.

ಇದನ್ನೂ ಓದಿ:ಹಿಂದುಗಳ ಮೇಲಿನ ದಾಳಿಗೆ ಪ್ರತೀಕಾರ: ಬಾಂಗ್ಲನ್ನರಿಗೆ ಹೋಟೆಲ್​ ಸೇವೆ ನಿರಾಕರಿಸಿದ ತ್ರಿಪುರ

ABOUT THE AUTHOR

...view details