ಹೈದರಾಬಾದ್:ಆಂಧ್ರಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿರುವ ಮಾಜಿ ಸಿಎಂ ಜಗನ್ಮೋಹನ್ ರೆಡ್ಡಿಗೆ ಸಂಕಷ್ಟಗಳು ಶುರುವಾಗಿವೆ. ಹೈದರಾಬಾದ್ನಲ್ಲಿರುವ ಮನೆಯ ಮುಂದಿನ ಕಟ್ಟಡಗಳನ್ನು ತೆಲಂಗಾಣ ಸರ್ಕಾರ ನೆಲಸಮ ಮಾಡಿದೆ. ಇವುಗಳನ್ನು ಅಕ್ರಮವಾಗಿ ಕಟ್ಟಲಾಗಿದೆ ಎಂಬ ಆರೋಪ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ತೆಲಂಗಾಣ ರಾಜ್ಯಧಾನಿಯಲ್ಲಿರುವ ಲೋಟಸ್ ಪಾಂಡ್ ಹೆಸರಿನ ಜಗನ್ ನಿವಾಸದ ಮುಂದೆ ಭದ್ರತಾ ಶೆಡ್‌ಗಳನ್ನು ನಿರ್ಮಾಣ ಮಾಡಲಾಗಿತ್ತು. ಅವುಗಳನ್ನು ಅಲ್ಲಿನ ಸರ್ಕಾರ ಶನಿವಾರ ತೆರವು ಕಾರ್ಯಾಚರಣೆ ನಡೆಸಿ, ನೆಲಕ್ಕುರುಳಿಸಿದೆ. ಲೋಟಸ್ ಪಾಂಡ್ ಎದುರು ಅಕ್ರಮವಾಗಿ ನಿರ್ಮಿಸಿದ್ದ ಪೊಲೀಸ್ ಭದ್ರತಾ ಶೆಡ್‌ಗಳನ್ನು ಜಿಹೆಚ್ಎಂಸಿ ಅಧಿಕಾರಿಗಳು ಒಡೆಸಿ ಹಾಕಿಸಿದ್ದಾರೆ. ನಿವಾಸದ ಮುಂದೆ ಇರುವ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಮೂರು ಶೆಡ್‌ಗಳನ್ನು ತೆರವುಗೊಳಿಸಿದ್ದಾರೆ.
ಆಂಧ್ರದಲ್ಲೂ ಕ್ರಮಕ್ಕೆ ನಿರ್ಧಾರ:ಮಾಜಿ ಸಿಎಂ ಜಗನ್ ಸಾರ್ವಜನಿಕ ಆಸ್ತಿಯನ್ನು ಆಕ್ರಮಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಾಜಿ ಸಿಎಂ ಅವರ ಆಡಳಿತ ಕಚೇರಿ ಮತ್ತು ವೈಎಸ್‌ಆರ್‌ಸಿಪಿಯ ಕಚೇರಿ ಮುಂದಿನ ರಸ್ತೆಯನ್ನು ಅಕ್ರಮವಾಗಿ ಕಬ್ಜಾ ಮಾಡಲಾಗಿದೆ ಎಂದು ಜನರು ದೂರಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂಬ ಕೂಗು ಎದ್ದಿದೆ.
ಸಾರ್ವಜನಿಕರ ಹಣದಲ್ಲಿ ನಿರ್ಮಿಸಿರುವ ಎರಡು ಪಥದ ರಸ್ತೆಯನ್ನು ಖಾಸಗಿ ಬಳಕೆಗೆ ಮಾತ್ರ ನೀಡಲಾಗಿದೆ ಎಂಬ ಆರೋಪ ಬಂದಿದೆ. ಹಿಂದಿನ ಜಗನ್ರ ಪಕ್ಷ ಸರ್ಕಾರದ ಹಣದಲ್ಲಿ ಖರೀದಿಸಿದ ಪೀಠೋಪಕರಣಗಳನ್ನು ಪಕ್ಷದ ಕಚೇರಿಯಲ್ಲಿ ಬಳಸಿಕೊಳ್ಳಲಾಗಿದೆ. ಈ ಬಗ್ಗೆಯೂ ಹೊಸ ಸರ್ಕಾರ ಶೀಘ್ರದಲ್ಲೇ ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಮಾಜಿ ಮುಖ್ಯಮಂತ್ರಿ ಜಗನ್ ಕ್ಯಾಂಪ್ ಕಚೇರಿಗೆ ಹೋಗುವ ಎರಡು ಪಥದ ರಸ್ತೆಯಲ್ಲಿ ಸಾಮಾನ್ಯ ನಾಗರಿಕರಿಗೆ ಪ್ರವೇಶವಿಲ್ಲವಾಗಿದೆ. ಈ ರಸ್ತೆಯಲ್ಲಿ ಸ್ಥಳೀಯರ ಸಂಚಾರ ನಿಷೇಧಿಸಿರುವುದು ವಿವಾದಕ್ಕೆ ಕಾರಣವಾಗುತ್ತಿದೆ. ಕಳೆದ ಐದು ವರ್ಷಗಳಿಂದ ಈ ರಸ್ತೆಯನ್ನು ಮುಖ್ಯಮಂತ್ರಿ ಕ್ಯಾಂಪ್ ಕಚೇರಿಗೆ ಮಾತ್ರ ಬಳಸಲಾಗುತ್ತಿದೆ. ಜಗನ್ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ಬಳಿಕ, ಅದನ್ನು ಪಕ್ಷದ ಕಚೇರಿಯನ್ನಾಗಿ ಪರಿವರ್ತಿಸಲಾಗಿದೆ.
ದ್ವಿಪಥ ರಸ್ತೆಯನ್ನು 5 ಕೋಟಿ ರೂಪಾಯಿ ಹಣದಲ್ಲಿ ನಿರ್ಮಿಸಲಾಗಿದೆ. ಒಂದೂವರೆ ಕಿಲೋ ಮೀಟರ್ ಉದ್ದದ ರಸ್ತೆಯಲ್ಲಿ ಭದ್ರತಾ ಕಾರಣಗಳಿಗಾಗಿ ಜನರ ಪ್ರವೇಶ ನಿರ್ಬಂಧಿಸಲಾಗಿದೆ. ಜಗನ್ ಸರ್ಕಾರ ಪತನವಾಗಿದ್ದರೂ, ರಸ್ತೆಯಲ್ಲಿ ಭದ್ರತಾ ಸಿಬ್ಬಂದಿ ಜನ ಸಂಚಾರಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳೀಯರು ನೂತನ ಸಿಎಂ ಚಂದ್ರಬಾಬು ನಾಯ್ಡು ಸರ್ಕಾರಕ್ಕೆ ದೂರು ನೀಡಿದ್ದಾರೆ. ಹೀಗಾಗಿ ರಾಜ್ಯ ಸರ್ಕಾರ ತನಿಖೆಗೆ ಮುಂದಾಗಿದೆ.
ಇದನ್ನೂ ಓದಿ:ಯಡಿಯೂರಪ್ಪ ವಿರುದ್ಧ ಬಂಧನ ವಾರೆಂಟ್: ರಾಜ್ಯ ಸರ್ಕಾರವೇ ಷಡ್ಯಂತ್ರದ ಸೂತ್ರಧಾರಿ - ಪ್ರಲ್ಹಾದ್ ಜೋಶಿ - Pralhad Joshi