ಆಗ್ರಾ(ಉತ್ತರ ಪ್ರದೇಶ):ಇಂಗ್ಲೆಂಡ್ನ ಮಾಜಿ ಪ್ರಧಾನಿ, ಭಾರತದ ಅಳಿಯ ರಿಷಿ ಸುನಕ್ ಅವರು ತಮ್ಮ ಕುಟುಂಬ ಸದಸ್ಯರೊಂದಿಗೆ ವಿಶ್ವವಿಖ್ಯಾತ ತಾಜ್ ಮಹಲ್‌ಗೆ ಶನಿವಾರ ಭೇಟಿ ನೀಡಿದರು. ಕೆಲ ದಿನಗಳಿಂದ ಭಾರತ ಪ್ರವಾಸದಲ್ಲಿರುವ ಅವರು ಇಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಿದ್ದಾರೆ.
ರಿಷಿ ಸುನಕ್, ಪತ್ನಿ ಅಕ್ಷತಾ ಮೂರ್ತಿ, ಪುತ್ರಿಯರಾದ ಕೃಷ್ಣ, ಅನುಷ್ಕಾ ಮತ್ತು ರಾಜ್ಯಸಭೆ ಸದಸ್ಯೆ, ಬರಹಗಾರ್ತಿ ಹಾಗು ಅತ್ತೆ ಸುಧಾ ಮೂರ್ತಿ ಅವರೊಂದಿಗೆ ಬಿಗಿ ಭದ್ರತೆಯ ನಡುವೆ ಪ್ರೇಮಸೌಧಕ್ಕೆ ಆಗಮಿಸಿದ್ದರು.
ತಾಜ್ಮಹಲ್ ಆವರಣದೊಳಗೆ ಆಗಮಿಸಿದ ರಿಷಿ ಸುನಕ್ ಥೇಟ್ ಭಾರತೀಯ ಶೈಲಿಯಲ್ಲಿ ಎರಡು ಕೈ ಮುಗಿದು ಜನರತ್ತ ನಮಸ್ಕರಿಸಿದರು. ಜನಸಮೂಹದತ್ತ ಕೈ ಬೀಸಿದರು. ಜನರು ಕೂಡ ಪ್ರೀತಿಯಿಂದ ಪ್ರತಿಕ್ರಿಯಿಸಿದರು.
'ನಿಜಕ್ಕೂ ಇದೊಂದು ಭೇಟಿ'- ಸಂದರ್ಶಕರ ಬುಕ್ನಲ್ಲಿ ಸಹಿ:ತಾಜ್ಮಹಲ್ ವೀಕ್ಷಣೆಯ ಬಳಿಕ ವಾಡಿಕೆಯಂತೆ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಪತ್ನಿಯೊಂದಿಗೆ ಸಹಿ ಹಾಕಿದರು. "ನಿಜಕ್ಕೂ ಇದೊಂದು ಭೇಟಿ. ಜಗತ್ತಿನ ಕೆಲವೇ ಅವಿಸ್ಮರಣೀಯ ಸ್ಥಳಗಳಲ್ಲಿ ತಾಜ್ ಮಹಲ್ ಕೂಡ ಒಂದು. ನಮ್ಮ ಮಕ್ಕಳು ಇದನ್ನು ವೀಕ್ಷಿಸಿದ್ದು ಎಂದಿಗೂ ಮರೆಯುವುದಿಲ್ಲ. ಆತ್ಮೀಯ ಆತಿಥ್ಯಕ್ಕೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ. ನಮ್ಮ ಇಡೀ ಕುಟುಂಬಕ್ಕೆ ಮರೆಯಲಾಗದ ಅನುಭವ. ಧನ್ಯವಾದಗಳು" ಎಂದು ಸುನಕ್ ಬರೆದಿದ್ದಾರೆ.