ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರದಲ್ಲಿ ಭಾನುವಾರ ದುರಂತ ಘಟನೆ ಸಂಭವಿಸಿದ್ದು, ಒಂದೇ ಕುಟುಂಬದ ಐವರು ತಮ್ಮ ಬಾಡಿಗೆ ನಿವಾಸದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಪೋಷಕರು ಮತ್ತು ಅವರ ಇಬ್ಬರು ಅಪ್ರಾಪ್ತ ಮಕ್ಕಳು ಮತ್ತು 28 ದಿನಗಳ ಹಿಂದೆ ಜನಿಸಿದ ಶಿಶು ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೂಲತಃ ಬಾರಾಮುಲ್ಲಾ ಜಿಲ್ಲೆಯ ಉರಿಯವರಾದ ಅಜಾಜ್ ಅಹ್ಮದ್ ಭಟ್ ಹಾಗೂ ಕುಟುಂಬಸ್ಥರು ಸಾವನ್ನಪ್ಪಿದ್ದಾರೆ ಎಂದು ಗುರುತಿಸಲಾಗಿದೆ. ಇವರು ಕಳೆದ ಎರಡು ತಿಂಗಳಿನಿಂದ ಇಲ್ಲಿ ಬಾಡಿಗೆ ವಸತಿಗೃಹದಲ್ಲಿ ವಾಸಿಸುತ್ತಿದ್ದರು. ಭಟ್ ಅವರು ಲಲಿತ್ ಗ್ರ್ಯಾಂಡ್ ಪ್ಯಾಲೇಸ್‌ನ ಖಾಸಗಿ ಹೋಟೆಲ್‌ನಲ್ಲಿ ಬಾಣಸಿಗರಾಗಿದ್ದರು.
ತನ್ನ ಮಗನನ್ನು ಸಂಪರ್ಕಿಸಲು ಸಾಧ್ಯವಾಗದ ಭಟ್ ಅವರ ತಾಯಿಯು ಮನೆ ಮಾಲೀಕ ಮುಖ್ತಾರ್ ಅಹ್ಮದ್ ಅವರನ್ನು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. "ಅಜಾಜ್ ಅಹ್ಮದ್ ಭಟ್ ತಾಯಿಯು ನನಗೆ ಕರೆ ಮಾಡಿ, ಸಂಜೆ 4 ಗಂಟೆಯಿಂದ ಅಜಾಜ್ ತನ್ನ ಕರೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ ಎಂದು ಹೇಳಿದರು. ಆಗ ನಾನು ಪರಿಶೀಲಿಸಲು ಇನ್ನೊಬ್ಬ ಬಾಡಿಗೆದಾರನನ್ನು ಕಳುಹಿಸಿದೆ" ಎಂದು ಮುಖ್ತಾರ್ ಹೇಳಿದರು.
"ಬಾಡಿಗೆದಾರನು ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಹಾಗಾಗಿ, ನಾವು ಬಾಗಿಲು ಒಡೆದು ತೆರೆದಾಗ ಅಜಾಜ್, ಅವರ ಪತ್ನಿ ಮತ್ತು ಅವರ ಮೂವರು ಮಕ್ಕಳು ಮೃತಪಟ್ಟಿರುವುದು ಕಂಡುಬಂದಿದೆ'' ಎಂದು ಮುಖ್ತಾರ್ ತಿಳಿಸಿದರು.